
ತಮ್ಮ ಮಕ್ಕಳಿಗೆ ಒಬಿಸಿ ಪ್ರಮಾಣಪತ್ರ ಪಡೆಯುವಲ್ಲಿ ಒಂಟಿ ತಾಯಂದಿರು ಎದುರಿಸುತ್ತಿರುವ ಸಂಕಷ್ಟಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಜಾತಿ ಸ್ಥಾನಮಾನ ನಿರ್ಧರಿಸಲು ತಂದೆಯ ವಂಶಾವಳಿ ಮಾತ್ರ ಅವಲಂಬಿಸಿರುವ ಈಗಿನ ಮಾರ್ಗಸೂಚಿಗಳ ವಿರುದ್ಧದ ಅರ್ಜಿ ಆಲಿಸಲು ಸೋಮವಾರ ಸಮ್ಮತಿಸಿದೆ.
ತಂದೆ ಮಗುವಿನ ಜೀವನದಲ್ಲಿ ಇಲ್ಲ ಎಂಬ ಒಂದೇ ಕಾರಣಕ್ಕಾಗಿ ಮಗುವಿಗೆ ಜಾತಿ ಸೌಲಭ್ಯ ಏಕೆ ನಿರಾಕರಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೆ ವಿ ವಿಶ್ವನಾಥನ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಪ್ರಶ್ನಿಸಿತು.
"ತಾಯಿ ಒಬಿಸಿ ಆಗಿದ್ದು, ಮಗುವನ್ನು ಒಬ್ಬಂಟಿಯಾಗಿ ಬೆಳೆಸುತ್ತಿದ್ದರೆ, ಪ್ರಮಾಣಪತ್ರಕ್ಕಾಗಿ ತಂದೆಯ ವಂಶಾವಳಿಯನ್ನು ಏಕೆ ಆಧರಿಸಬೇಕು? ತಾಯಿಯ ಜಾತಿ ಆಧಾರದ ಮೇಲೆ ಮಗುವಿಗೆ ಪ್ರಮಾಣಪತ್ರವನ್ನು ಏಕೆ ನೀಡಬಾರದು? " ಎಂದು ನ್ಯಾ. ವಿಶ್ವನಾಥನ್ ಕೇಳಿದರು.
ಪ್ರಕರಣ ಮಹತ್ವದ್ದು ಎಂದ ನ್ಯಾಯಾಲಯ, ಇದರ ಬಗ್ಗೆ ರಾಜ್ಯ ಸರ್ಕಾರಗಳ ವಾದ ಆಲಿಸಬೇಕಾಗುತ್ತದೆ ಎಂದು ಹೇಳಿದೆ. ಅಂತರ್ಜಾತಿ ವಿವಾಹವಾದ ಎಸ್‌ಸಿ/ಎಸ್‌ಟಿ ಸಮುದಾಯಗಳ ತಾಯಂದಿರು ಬೆಳೆಸಿದ ಮಕ್ಕಳಿಗೆ ಜಾತಿ ಸೌಲಭ್ಯಗಳನ್ನು ವಿಸ್ತರಿಸಿದ ಹಿಂದಿನ ತೀರ್ಪುಗಳನ್ನು ಅದು ಇದೇ ವೇಳೆ ಉಲ್ಲೇಖಿಸಿದೆ.
ಎಸ್‌ಸಿ, ಎಸ್‌ಟಿ ಸಮುದಾಯದಲ್ಲಿ ಬೆಳೆದ ಮಗುವಿಗೆ ಆ ಸವಲತ್ತು ಇರುವಾಗ ಒಬಿಸಿ ವರ್ಗಕ್ಕೆ ಸೇರಿದ ತಾಯಂದಿರ ಮಕ್ಕಳಿಗೆ ಅದನ್ನು ಏಕೆ ನೀಡಬಾರದು ಎಂದು ತರ್ಕಿಸಿತು.
"ವಿಷಯದ ಮಹತ್ವವನ್ನು ಪರಿಗಣಿಸಿ ಮತ್ತು ಸಿಜೆಐ ಅವರ ನಿರ್ದೇಶನಗಳಿಗೆ ಒಳಪಟ್ಟು, ಜುಲೈ 22 ರಂದು ವಿಷಯವನ್ನು ಅಂತಿಮ ವಿಚಾರಣೆಗೆ ಇಡಲಿ " ಎಂದು ನ್ಯಾಯಪೀಠ ಆದೇಶಿಸಿತು.
ತಂದೆಯ ರಕ್ತ ಸಂಬಂಧಿಗಳನ್ನು ಆಧರಿಸಿ ಜಾತಿ ಪ್ರಮಾಣಪತ್ರನೀಡಬೇಕೆಂಬ ಪ್ರಸ್ತುತ ನಿಯಮವನ್ನು ಅರ್ಜಿ ಪ್ರಶ್ನಿಸಿದೆ.