ಮರ್ಯಾದೆಗೇಡು ಹತ್ಯೆ: ಇಬ್ಬರು ಪೊಲೀಸರು ಸೇರಿದಂತೆ 11 ಮಂದಿ ವಿರುದ್ಧದ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಹತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಒಬ್ಬ ವ್ಯಕ್ತಿಗೆ ಎರಡು ವರ್ಷಗಳ ಕಾಲ ವಿಧಿಸಿದ್ದ ಜೈಲು ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿದಿದೆ.
Supreme Court
Supreme Court
Published on

ತಮಿಳುನಾಡಿನಲ್ಲಿ ಅಂತರ್ಜಾತಿ ವಿವಾಹವಾಗಿದ್ದ ದಂಪತಿಯನ್ನು 2003ರಲ್ಲಿ ಮರ್ಯಾದೆಗೇಡು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಹನ್ನೊಂದು ಜನರರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ [ಕೆಪಿ ತಮಿಳುಮಾರನ್ ಮತ್ತು ಡಿವೈಎಸ್‌ಪಿ ಮೂಲಕ ಸರ್ಕಾರ ನಡುವಣ ಪ್ರಕರಣ].

ಮದ್ರಾಸ್ ಹೈಕೋರ್ಟ್‌ 2022ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ವಜಾಗೊಳಿಸಿತು. ಆ ಮೂಲಕ ಹತ್ತು ಆರೋಪಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಮತ್ತು ಒಬ್ಬನಿಗೆ ವಿಧಿಸಲಾಗಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅದು ಎತ್ತಿಹಿಡಿದಿದೆ.

Also Read
ಮರ್ಯಾದೆಗೇಡು ಹತ್ಯೆಗೊಳಗಾದ ಶಂಕರ್ ಸ್ಮರಣಾರ್ಥ ಸಭೆ: ಪತ್ನಿಗೆ ರಕ್ಷಣೆ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ

ಪ್ರಸ್ತುತ ಜಾಮೀನು ಪಡೆದಿರುವ ಎಲ್ಲಾ ಅಪರಾಧಿಗಳು ಉಳಿದ ಶಿಕ್ಷೆಯ ಅವಧಿಯನ್ನು ಅನುಭವಿಸುವುದಕ್ಕಾಗಿ ಎರಡು ವಾರಗಳಲ್ಲಿ ಶರಣಾಗುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಸಂತ್ರಸ್ತರ ಕುಟುಂಬಕ್ಕೆ ರಾಜ್ಯ ಸರ್ಕಾರ ₹5 ಲಕ್ಷ ಪರಿಹಾರ ನೀಡುವಂತೆಯೂ ಅದು ಸೂಚಿಸಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ಮತ್ತು ಸೆಕ್ಷನ್ 149 ಮತ್ತು 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಕೊಲೆ ಸೇರಿದಂತೆ ಅಪರಾಧಗಳಿಗೆ ಶಿಕ್ಷೆಗೊಳಗಾದ ಬಾಲಕಿಯ ಕುಟುಂಬದ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣ ದಲಿತ ಸಮುದಾಯಕ್ಕೆ ಸೇರಿದ ಕೆಮಿಕಲ್ ಎಂಜಿನಿಯರಿಂಗ್ ಪದವೀಧರ ಮುರುಗೇಶನ್ ಮತ್ತು ವಣ್ಣಿಯಾರ್ ಸಮುದಾಯಕ್ಕೆ ಸೇರಿದ ವಾಣಿಜ್ಯ ಪದವೀಧರೆ ಕಣ್ಣಗಿ ಅವರ ಕೊಲೆಗೆ ಸಂಬಂಧಿಸಿದೆ. ರಹಸ್ಯವಾಗಿ ಮದುವೆಯಾಗಿ ಗ್ರಾಮದಿಂದ ಪರಾರಿಯಾಗಿದ್ದ ದಂಪತಿಯನ್ನು ಪತ್ತೆ ಹಚ್ಚಿ ಮರಳಿ ಹಳ್ಳಿಗೆ ಕರೆತಂದು ಅವರಿಗೆ ವಿಷವುಣಿಸಿ ಕೊಲೆ ಮಾಡಲಾಗಿತ್ತು. ನಂತರ ದೇಹಗಳನ್ನು ಸುಟ್ಟುಹಾಕಲಾಗಿತ್ತು.

ಒಟ್ಟು ಹದಿನೈದು ಆರೋಪಿಗಳು ವಿಚಾರಣೆಯನ್ನು ಎದುರಿಸಿದ್ದರು. ಅವರಲ್ಲಿ ಹದಿಮೂರು ಜನರನ್ನು ವಿಚಾರಣಾ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತ್ತು. ಅವರಲ್ಲಿ ಹನ್ನೆರಡು ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಒಬ್ಬರಿಗೆ ಮರಣದಂಡನೆ ವಿಧಿಸಲಾಗಿತ್ತು.

ಮೇಲ್ಮನವಿ ಸಲ್ಲಿಸಿದಾಗ, ಹದಿಮೂರು ಜನರಲ್ಲಿ ಒಂಬತ್ತು ಜನರು ತಪ್ಪಿತಸ್ಥರು ಎಂದು ಘೋಷಿಸಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿಯಿತು. ಇಬ್ಬರು ಆರೋಪಿಗಳನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಯಿತು.

Also Read
ಮಗಳ ಪ್ರಿಯಕರನ ಮರ್ಯಾದೆಗೇಡು ಹತ್ಯೆ: ತಂದೆ- ಮಗನ ಜೀವಾವಧಿ ಶಿಕ್ಷೆ ಮೊಟಕುಗೊಳಿಸಿದ ಬಾಂಬೆ ಹೈಕೋರ್ಟ್

ಆರೋಪಿ ಸಬ್-ಇನ್ಸ್‌ಪೆಕ್ಟರ್ ಕೆ ಪಿ ತಮಿಳುಮಾರನ್ ಅವರನ್ನು ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್ 3(2)(i) ಮತ್ತು ಐಪಿಸಿಯ ಸೆಕ್ಷನ್ 21ರ ಅಡಿಯಲ್ಲಿನ ಅಪರಾಧಗಳಿಂದ ಖುಲಾಸೆಗೊಳಿಸಲಾಯಿತು. ಆದರೆ ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್ 4 ಮತ್ತು ಐಪಿಸಿಯ ಸೆಕ್ಷನ್ 217ರ ಅಡಿಯಲ್ಲಿನ ಅಪರಾಧಗಳಿಗೆ ಅವರ ಶಿಕ್ಷೆ ಮುಂದುವರೆಸಿ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎರಡು ವರ್ಷಗಳ ಕಠಿಣ ಸೆರೆವಾಸಕ್ಕೆ ಇಳಿಸಲಾಗಿತ್ತು. ಮತ್ತೊಬ್ಬ ಆರೋಪಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿತ್ತು.

ಹೀಗಾಗಿ, ಒಟ್ಟು ಹತ್ತು ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಒಬ್ಬ ಆರೋಪಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆರೋಪಿಗಳು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Kannada Bar & Bench
kannada.barandbench.com