
ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಇಬ್ಬರು ಸದಸ್ಯರನ್ನು ಮಾರ್ಚ್ 2002ರಲ್ಲಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕ್ಸ್‌ವಾದಿ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಎಂ) ನಾಲ್ವರು ಕಾರ್ಯಕರ್ತರಿಗೆ ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಈಚೆಗೆ ಎತ್ತಿಹಿಡಿದಿದೆ [ಎಡಪ್ಪಾಡಿ ದಿನೇಶನ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಆರ್‌ಎಸ್‌ಎಸ್ ಮತ್ತು ಸಿಪಿಎಂ ನಡುವಿನ ದೀರ್ಘಕಾಲದ ವೈರತ್ವದಿಂದಾಗಿ ಸಾಕ್ಷಿಗಳ ಹೇಳಿಕೆಗಳಲ್ಲಿ ಸಣ್ಣಪುಟ್ಟ ವಿರೋಧಾಭಾಸಗಳಿದ್ದು ಇವು ಪ್ರಾಸಿಕ್ಯೂಷನ್ ಪ್ರಕರಣ ವಜಾಗೊಳಿಸಲು ಸಾಕಾಗುವುದಿಲ್ಲ ಎಂದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿಯಿತು.
ಗಮನಾರ್ಹ ಸಂಗತಿ ಎಂದರೆ, ಈ ಪ್ರಕರಣದ ಕೆಲವು ಸಾಕ್ಷಿಗಳು ಆರ್‌ಎಸ್‌ಎಸ್‌ಗೆ ಪಕ್ಷಾಂತರಗೊಂಡ ಸಿಪಿಎಂನ ಮಾಜಿ ಕಾರ್ಯಕರ್ತರಾಗಿದ್ದರು. ಯಾವುದೇ ಸಂದರ್ಭದಲ್ಲಿ, ಮೇಲ್ಮನವಿದಾರರ ಅಪರಾಧವನ್ನು ಸಾಬೀತಪಡಿಸುವಂತಹ ಸಾಕಷ್ಟು ಸಾಕ್ಷ್ಯಗಳಿವೆ ಎಂದು ನ್ಯಾಯಾಲಯ ತಿಳಿಸಿತು.
ಆರ್‌ಎಸ್‌ಎಸ್ 2002ರಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಿಪಿಎಂ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಆರ್‌ಎಸ್‌ಎಸ್‌ನ ಇಬ್ಬರು ಕಾರ್ಯಕರ್ತರಾದ ಸುನೀಲ್ ಮತ್ತು ಸುಜೀಶ್ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಎಂನ ವಿವಿಧ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಎಲ್ಲಾ ಆರೋಪಿಗಳು ತಪ್ಪಿತಸ್ಥರು ಎಂದು 2006ರಲ್ಲಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು.
ಆದರೆ ಉಳಿದ ಆರೋಪಿಗಳನ್ನು 2011ರಲ್ಲಿ ಖುಲಾಸೆಗೊಳಿಸಿದ ಕೇರಳ ಹೈಕೋರ್ಟ್ ಸಿಪಿಎಂನ ಐವರು ಕಾರ್ಯಕರ್ತರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿಯಿತು. ಇದನ್ನು ಪ್ರಶ್ನಿಸಿ ಐವರು ಆರೋಪಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ಬಾಕಿ ಇರುವಂತೆಯೇ ಆರೋಪಿಗಳಲ್ಲಿ ಒಬ್ಬಾತ ಮೃತಪಟ್ಟಿದ್ದರು. ಜನವರಿ 6 ರಂದು, ಸುಪ್ರೀಂ ಕೋರ್ಟ್ ಉಳಿದ ನಾಲ್ವರು ಮೇಲ್ಮನವಿದಾರರ ಶಿಕ್ಷೆಯನ್ನು ಎತ್ತಿಹಿಡಿದಿದೆ.