ʼನಾಮ ನಿರ್ದೇಶನವಾದರೂ ಅನರ್ಹತೆ ಮುಂದುವರಿಯಲಿದೆʼ: ಮಂತ್ರಿಯಾಗುವ ವಿಶ್ವನಾಥ್‌ ಕನಸಿಗೆ ಸುಪ್ರೀಂನಲ್ಲೂ ತಣ್ಣೀರು

ಪಕ್ಷಾಂತರ ವಿರೋಧಿ ಕಾಯಿದೆ ಅಡಿ ಅನರ್ಹರಾಗಿರುವ ಬಿಜೆಪಿ ಮುಖಂಡ ಎಚ್‌ ವಿಶ್ವನಾಥ್‌ ಅವರು ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿದ್ದರೂ ಅನರ್ಹತೆ ಮುಂದುವರಿಯಲಿದೆ ಎಂದಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
H Vishwanath
H Vishwanath

ಪಕ್ಷಾಂತರ ವಿರೋಧಿ ಕಾಯಿದೆ ಅಡಿ ಅನರ್ಹರಾಗಿರುವ ಬಿಜೆಪಿ ಮುಖಂಡ ಎಚ್‌ ವಿಶ್ವನಾಥ್‌ ಅವರು ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿದ್ದರೂ ಅನರ್ಹತೆ ಮುಂದುವರಿಯಲಿದೆ ಎಂದಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ.

ಎಂಎಲ್‌ಸಿಯಾದ ವಿಶ್ವನಾಥ್‌ ಅವರು ಸಂವಿಧಾನದ 164 (1) (ಬಿ) ಮತ್ತು 361 (ಬಿ) ಅಡಿ ಅನರ್ಹಗೊಂಡಿದ್ದು, ಅದು ಅವರ ಪ್ರಸಕ್ತ ಪರಿಷತ್‌ ಅವಧಿ ಮುಗಿಯುವವರೆಗೂ ಮುಂದುವರಿಯಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಕಳೆದ ನವೆಂಬರ್‌ನಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿದ್ದ ಪೀಠವು ನಡೆಸಿತು. ಹೈಕೋರ್ಟ್‌ ತೀರ್ಪು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗುವ ವಿಶ್ವನಾಥ್‌ ಅವರ ಆಸೆಯನ್ನು ನುಚ್ಚುನೂರಾಗಿಸಿತ್ತು.

“ಸಂವಿಧಾನದ 164(1)(ಬಿ) ವಿಧಿಯಡಿ ನನ್ನನ್ನು ಅನರ್ಹಗೊಳಿಸಿರುವ ವಿಚಾರವು ನಿರ್ದಿಷ್ಟ ಸದನಕ್ಕೆ ಸೀಮೀತವಾಗಿರುತ್ತದೆ. ಬೇರೊಂದು ವಿಧಾನದಲ್ಲಿ ನಾನು ಸದನ ಪ್ರವೇಶಿಸಿದರೆ…”, ಎಂದು ವಿಶ್ವನಾಥ್‌ ಪರ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ವಾದಿಸಲು ಮುಂದಾದರು. ಈ ವೇಳೆ ಅವರ ವಾದಕ್ಕೆ ಸಮ್ಮತಿಸಿದ ಪೀಠವು, ಜನರಿಂದ ಆಯ್ಕೆಯಾಗದೇ ನಾಮನಿರ್ದೇಶನಗೊಂಡರೆ ಅನರ್ಹತೆ ಮುಂದುವರಿಯಲಿದೆ ಎಂದಿತು.

“ಯಾವುದೇ ವಿಧಾನದ ಮೂಲಕ ಬಂದರೂ ಅಷ್ಟೇ. ನೀವು ಜನರಿಂದ ಚುನಾಯಿತರಾದರೆ ಅದು ಸರಿ. ನೀವು ಸುಮ್ಮನೆ ನಾಮನಿರ್ದೇಶನಗೊಂಡರೆ ಅದು ಅನ್ವಯಿಸುವುದಿಲ್ಲ. ಈ ವಿಚಾರದಲ್ಲಿ ಹೈಕೋರ್ಟ್‌ ನಿಲುವು ಸರಿಯಾಗಿದೆ” ಎಂದಿರುವ ಸಿಜೆ ಬೊಬ್ಡೆ ಅವರು ಹೈಕೋರ್ಟ್‌ ಆದೇಶದಲ್ಲಿ ಸಕಾರಣಗಳನ್ನು ನೀಡಲಾಗಿದೆ ಎಂದಿತು.

“ತಾಂತ್ರಿಕ ಕಾರಣಗಳ ಆಧಾರದಲ್ಲಿ ನಿಮಗೆ ಪರಿಹಾರ ನೀಡಲಾಗದು. ನೀವು ಸಚಿವರಾಗಲು ಅರ್ಹರಲ್ಲ ಎಂಬುದು ವಾಸ್ತವ” ಎಂದು ಹೇಳಿದ ಸಿಜೆ ಬೊಬ್ಡೆ ಅವರು ಅರ್ಜಿಯನ್ನು ವಜಾಗೊಳಿಸಿದರು.

Also Read
ಸಚಿವರಾಗುವ ವಿಶ್ವನಾಥ್‌ ಕನಸಿಗೆ ಹಿನ್ನಡೆಯಾಗಿರುವುದು ಏಕೆ? ಇಲ್ಲಿದೆ ಹೈಕೋರ್ಟ್‌ ಆದೇಶದ ಮಾಹಿತಿ

ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಸಂಬಂಧ ಹದಿನೇಳು ಶಾಸಕರು ರಾಜೀನಾಮೆ ನೀಡಿದ್ದರು. ಇದರಲ್ಲಿ ವಿಶ್ವನಾಥ್‌ ಸಹ ಒಬ್ಬರಾಗಿದ್ದರು. ಸಂವಿಧಾನದ ಹತ್ತನೇ ಶೆಡ್ಯೂಲ್‌ ಅನ್ವಯ ಇದು ಪಕ್ಷಾಂತರ ಚಟುವಟಿಕೆ ಎಂದು ಹೇಳಿ ಅಂದಿನ ಸ್ಪೀಕರ್ ರಮೇಶ್‌ ಕುಮಾರ್‌ ಅವರು‌ ವಿಶ್ವನಾಥ್‌ ಸೇರಿದಂತೆ ಹಲವರ ಸದಸ್ಯತ್ವವನ್ನು ರದ್ದುಗೊಳಿಸಿದ್ದರು. ಸ್ಪೀಕರ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಬಳಿಕ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿಶ್ವನಾಥ್‌ ಪರಾಭವಗೊಂಡಿದ್ದರು.

ಅದಾಗ್ಯೂ, ಸಂಪುಟಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ವಿಶ್ವನಾಥ್‌ ಅವರನ್ನು ನಾಮನಿರ್ದೇಶನ ಮಾಡಿದರೂ ಅವರ ಅನರ್ಹತೆ ವಿಚಾರ ಹಾಗೆಯೇ ಉಳಿಯಲಿದೆ ಎಂದು ಹೇಳಿ ತೀರ್ಪು ನೀಡಿತ್ತಲ್ಲದೇ ಅವರನ್ನು ಸಂಪುಟಕ್ಕೆ ಸೇರಿಸುವಾಗ ಈ ವಿಚಾರವನ್ನು ಪರಿಗಣಿಸುವಂತೆ ರಾಜ್ಯಪಾಲರನ್ನು ಎಚ್ಚರಿಸಿತ್ತು.

Related Stories

No stories found.
Kannada Bar & Bench
kannada.barandbench.com