ಸರ್ಕಾರ ಹಣ ಒದಗಿಸದ ಕಾರಣ ಒಂದು ಹೈಕೋರ್ಟ್‌ಗೆ ಅತಿ ಕಡಿಮೆ ಬೆಲೆ ವಿ ಸಿ ಪರವಾನಗಿಯನ್ನು ಸುಪ್ರೀಂ ನೀಡುವಂತಾಯಿತು: ಸಿಜೆಐ

ನಾನು ಆ ಹೈಕೋರ್ಟ್ ಯಾವುದೆಂದು ಹೇಳುವುದಿಲ್ಲ. ಆದರೆ ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ್ದ ವೇಳೆ ವರ್ಚುವಲ್‌ ಹಿಯರಿಂಗ್‌ಗೆ ಅಗತ್ಯವಾದ ತಂತ್ರಾಂಶದ ಪರವಾನಗಿಗೆ ಹಣ ಒದಗಿಸಿಕೊಳ್ಳಲಾಗದ ಹೈಕೋರ್ಟ್ ಒಂದಿತ್ತು ಎಂದು ಸಿಜೆಐ ವಿವರಿಸಿದರು.
CJI DY Chandrachud
CJI DY Chandrachud

ನ್ಯಾಯಾಲಯಗಳಲ್ಲಿ ಡಿಜಿಟಲ್ ಮೂಲಸೌಕರ್ಯಕ್ಕೆ ಧನಸಹಾಯ ನೀಡುವಲ್ಲಿ ರಾಜ್ಯ ಸರ್ಕಾರಗಳು ವಹಿಸಬೇಕಾದ ಪ್ರಮುಖ ಪಾತ್ರವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಗುರುವಾರ ಪ್ರಸ್ತಾಪಿಸಿದ್ದಾರೆ.

ಆದರೆ, ಅಂತಹ ಸೌಲಭ್ಯಗಳಿಗೆ ರಾಜ್ಯ ಸರ್ಕಾರಗಳು ಹಣ ನೀಡದ ಸಂದರ್ಭಗಳಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಸಾಂಕ್ರಾಮಿಕ ಹರಡಿದ್ದ ಸಮಯದಲ್ಲಿ ನಡೆದ ಘಟನೆಯೊಂದನ್ನು ಪ್ರಸ್ತಾಪಿಸಿದ ಅವರು ʼವೀಡಿಯೊ ಕಾನ್ಫರೆನ್ಸ್‌ ತಂತ್ರಾಂಶಕ್ಕಾಗಿ ಪರವಾನಗಿ ಪಡೆಯಲು ಅಗತ್ಯ ಹಣ ಹೊಂದಿಸಿಕೊಳ್ಳುವಲ್ಲಿ ಹೈಕೋರ್ಟ್‌ ಒಂದು ತೊಂದರೆ ಎದುರಿಸಿತು” ಎಂದು ಅವರು ತಿಳಿಸಿದರು.

ಕಡೆಗೆ ಸುಪ್ರೀಂ ಕೋರ್ಟ್‌ ತನ್ನ ಬಳಿ ಇದ್ದ ಅತಿ ಕಡಿಮೆ ಬೆಲೆಯ ಕೆಲ ಸಾಫ್ಟ್‌ವೇರ್‌ ಪರವಾನಗಿಗಳನ್ನು ಆ ಹೈಕೋರ್ಟ್‌ಗೆ ನೀಡಬೇಕಾಯಿತು ಎಂದು ಅವರು ವಿವರಿಸಿದರು.

Also Read
ವರ್ಚುವಲ್‌ ಕಲಾಪ ಕೋವಿಡ್‌ ಕೊಟ್ಟ ಕೊಡುಗೆ: ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ

“ರಾಜ್ಯ ಸರ್ಕಾರಗಳು ಕೂಡ ಹಣ ನೀಡದ ಸಂದರ್ಭಗಳಿವೆ. ನಾನು ಹೈಕೋರ್ಟ್‌ ಯಾವುದೆಂದು ಹೇಳುವುದಿಲ್ಲ. ಆದರೆ ಕೋವಿಡ್‌ ವೇಳೆ ಪರವಾನಗಿಗೆ ಹಣ ಪಾವತಿಸಲಾಗದ ಹೈಕೋರ್ಟ್‌ ಒಂದಿತ್ತು. ನಾವು ಸುಪ್ರೀಂ ಕೋರ್ಟ್‌ನ ಕೆಲ ಪರವಾನಗಿಗಳನ್ನು ತೆಗೆದು ಅದಕ್ಕೆ ನೀಡಿದೆವು. ಆ ಪರವಾನಗಿಗಳು ತೀರಾ ಕಡಿಮೆ ಬೆಲೆಯವಾಗಿದ್ದವು” ಎಂದು ಅವರು ಹೇಳಿದರು.

ಇಂತಹದ್ದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋವಿಡ್‌ ಹರಡಿದ್ದ ಸಮಯದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾ.ಅಭಯ್ ಎಸ್ ಓಕಾ ಅವರು ತಮ್ಮ ಅನುಭವವನ್ನು ಈ ಹಿಂದೆ ಡಿಸೆಂಬರ್‌ 2022ರಲ್ಲಿ ಹಂಚಿಕೊಂಡಿದ್ದರು. “ನ್ಯಾಯಮೂರ್ತಿಗಳು ಮತ್ತು ರಿಜಿಸ್ಟ್ರಿ ಸಿಬ್ಬಂದಿ ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ನಡೆಸುವುದಕ್ಕಾಗಿ ಜೂಮ್‌ ಕಂಪೆನಿಗೆ ಚಂದಾದಾರರಾಗಲು ತಮ್ಮದೇ ಆದ ಕ್ರೆಡಿಟ್‌ ಕಾರ್ಡ್‌ ಬಳಸಿ ಹಣ ಪಾವತಿಸಿದ್ದರು” ಎಂದು ಅವರು ತಿಳಿಸಿದ್ದರು.

ಈಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಓಕಾ ಅವರು ಹಣ ಮರುಪಾವತಿ ಪಡೆಯಲು ತನಗೆ ನಾಲ್ಕು ತಿಂಗಳಿಗಿಂತ ಹೆಚ್ಚು ಸಮಯ ಹಿಡಿದಿತ್ತು ಎಂದು ನೆನೆದಿದ್ದರು.

Related Stories

No stories found.
Kannada Bar & Bench
kannada.barandbench.com