ಖಾಸಗಿತನದ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದರೊಂದಿಗೆ ಕಾನೂನು ಜಾರಿ ಸಂಸ್ಥೆಗಳ ಕಣ್ಗಾವಲಿಗೆ ಅನುವು ಮಾಡಿಕೊಡುವ ಕಾನೂನನ್ನು ಕ್ರೋಡೀಕರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿ ಎಚ್ ಆರ್ ಖನ್ನಾ ಸ್ಮಾರಕ 3ನೇ ರಾಷ್ಟ್ರೀಯ ವಿಚಾರ ಸಂಕಿರಣದ ವೇಳೆ ನ್ಯಾಯಮೂರ್ತಿಗಳು ʼಪ್ರಭುತ್ವದ ಕಣ್ಗಾವಲು ಮತ್ತು ಗೌಪ್ಯತೆ - ನಡುವಿನ ಲಕ್ಷ್ಮಣ ರೇಖೆʼ ಎಂಬ ವಿಷಯದ ಕುರಿತು ಮಾತನಾಡಿದರು. ಭೋಪಾಲ್‌ನ ರಾಷ್ಟ್ರೀಯ ಕಾನೂನು ಸಂಸ್ಥೆ ವಿಶ್ವವಿದ್ಯಾಲಯ ಹಾಗೂ ರಾಯಪುರದ ಹಿದಾಯತುಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಷ್ಠಾನ (ಸಿಎಎನ್) ವರ್ಚುವಲ್ ವಿಧಾನದಲ್ಲಿ ವಿಚಾರ ಸಂಕಿರಣ ಏರ್ಪಡಿಸಿತ್ತು.
"ಪ್ರಭುತ್ವದ ಯಂತ್ರವನ್ನು ಸುಗಮಗೊಳಿಸುವ ಯಾವುದೇ ಕ್ರಮವು ಕಾನೂನಿನ ಅಧಿಕೃತತೆಯಿಂದ ಬೆಂಬಲಿತವಾಗಿರಬೇಕು. ಹೀಗಾಗಿ, ತನಿಖಾ ಸಂಸ್ಥೆಯು ಕಣ್ಗಾವಲು ಕಾರ್ಯವನ್ನು ಕೈಗೊಳ್ಳಲು ಅಧಿಕಾರ ನೀಡುವ ಒಂದು ಕ್ರೋಡೀಕೃತ ಕಾನೂನು ಇರಬೇಕು. ಅಂತಹ ಕಾನೂನು ಸಂವಿಧಾನಕ್ಕೆ ಅದರಲ್ಲಿಯೂ ಸಂವಿಧಾನದ ಭಾಗ IIIಕ್ಕೆ ಬದ್ಧವಾಗಿರಬೇಕು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡುವ ಸಂದರ್ಭದಲ್ಲಿ ಯಾವುದೇ ಅನಿಯಂತ್ರಿತ ಕ್ರಮಕ್ಕೆ ಮೂಗುದಾರ ಹಾಕುತ್ತದೆ" ಎಂದು ಅವರು ಹೇಳಿದರು.
ಕಣ್ಗಾವಲು ಅಗತ್ಯತೆ ಕುರಿತಂತೆಯೂ ಮಾತನಾಡಿದ ಅವರು, "ಕಣ್ಗಾವಲು ಮತ್ತು ಗೌಪ್ಯತೆ ಜೊತೆಜೊತೆಯಾಗಿ ಕಾರ್ಯನಿರ್ವಹಿಸಬೇಕು. ಗೌಪ್ಯತೆ ಇರುವವರೆಗೆ, ಕಣ್ಗಾವಲು ಖಂಡಿತವಾಗಿಯೂ ಮುಂದುವರಿಯುತ್ತದೆ. ಆಧುನಿಕ ಜಗತ್ತು ನಿಜವಾಗಿಯೂ ಬದುಕಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಕಷ್ಟಕರ ಸ್ಥಳವಾಗಿ ಪರಿಣಮಿಸಿದೆ. ಶಾಂತಿಗೆ ತೆರುತ್ತಿರುವ ಬೆಲೆ ನಿಸ್ಸಂಶಯವಾಗಿ ತುಂಬಾ ಹೆಚ್ಚಾಗಿದೆ. ಕಣ್ಗಾವಲು ಇಲ್ಲದ ಯಾವುದೇ ಪ್ರಭುತ್ವ ದುರ್ಬಲವೆಂದು ಭಾವಿಸಲ್ಪಡುತ್ತದೆ ಮತ್ತು ಅಪರಿಚಿತ ಮೂಲಗಳಿಂದ ದಾಳಿಗೆ ತುತ್ತಾಗುತ್ತದೆ ಎಂದು ಎಣಿಸಬಹುದು. ವ್ಯಾಪಕ ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕಾಗಿಯೂ ಕಣ್ಗಾವಲು ಅಗತ್ಯವಾದುದಾಗಿರಬಹುದು” ಎಂದರು.
ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಸಿಟಿವಿಗಳಿದ್ದರೆ ಉಂಟಾಗುವ ಅಪಾಯಗಳ ಬಗ್ಗೆ ಹಿರಿಯ ವಕೀಲ ಶ್ಯಾಮ್ ದಿವಾನ್ ಗಮನ ಸೆಳೆದರು. ಇದು ಅಂಕುಶ ಪ್ರಧಾನ ಸಮಾಜಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮತ್ತೊಬ್ಬ ಹಿರಿಯ ವಕೀಲ ಗುರು ಕೃಷ್ಣ ಕುಮಾರ್ ಉಪಸ್ಥಿತರಿದ್ದರು.