

ಭಾರಿ ಚರ್ಚೆಗೆ ಗ್ರಾಸವಾಗಿದ್ದ ಎರಡೂವರೆ ದಶಕಗಳ ಹಿಂದಿನ ತೆಲುಗು ನಟಿ ಪ್ರತ್ಯುಷಾ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಗೆಳೆಯ ಗುಡಿಪಲ್ಲಿ ಸಿದ್ಧಾರ್ಥ ರೆಡ್ಡಿ ಎಂಬಾತನಿಗೆ ವಿಧಿಸಲಾದ ಶಿಕ್ಷೆಯನ್ನು ಮಂಗಳವಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್ ಆತ್ಮಹತ್ಯೆಗೆ ಪರಸ್ಪರ ಒಪ್ಪಿದ ಪ್ರಕರಣದಲ್ಲಿ ಬದುಕುಳಿದವರು ಶಿಕ್ಷಾರ್ಹರು ಎಂದು ಹೇಳಿದೆ. ಆ ಮೂಲಕ ರೆಡ್ಡಿ ನಾಲ್ಕು ವಾರಗಳ ಒಳಗೆ ಶರಣಾಗುವಂತೆ ತಾಕೀತು ಮಾಡಿದೆ.
ಇದು ಆರೋಪಿ ಮತ್ತು ಮೃತ ವ್ಯಕ್ತಿಯ ನಡುವಿನ ಆತ್ಮಹತ್ಯೆ ಒಪ್ಪಂದ ಪ್ರಕರಣ ಎಂಬುದು ದಾಖಲೆಗಳು ಮತ್ತು ಸಾಕ್ಷ್ಯಗಳಿಂದ ಸ್ಪಷ್ಟವಾಗುತ್ತದೆ ಎಂದಿರುವ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಆತ್ಮಹತ್ಯೆಗೆ ಇಬ್ಬರೂ ಪರಸ್ಪರ ಒಪ್ಪಿರುವುದರಿಂದ ಬದುಕುಳಿದವರ ಮೇಲೆ ಕಾಯಿದೆ ಚಲಾಯಿಸಲು ಈ ಒಪ್ಪಂದ ಪ್ರೇರಣೆ ನೀಡುತ್ತದೆ ಎಂದಿದೆ.
ಇಬ್ಬರೂ ಸಕ್ರಿಯವಾಗಿ ಭಾಗವಹಿಸದೆ ಹೋಗಿದ್ದರೆ ಈ ಕೃತ್ಯ ನಡೆಯುತ್ತಿರಲಿಲ್ಲ ಎಂದು ಪೀಠ ತಿಳಿಸಿದೆ. ಜೀವ ರಕ್ಷಣೆ ಪ್ರಭುತ್ವದ ಮೂಲಭೂತ ಹಿತಾಸಕ್ತಿಯಾಗಿರುವುದರಿಂದ, ಜೀವತ್ಯಾಗಕ್ಕೆ ಸಹಾಯ ಮಾಡುವುದನ್ನು ಕಾನೂನು ಅಪರಾಧವಾಗಿ ಪರಿಗಣಿಸುತ್ತದೆ. ಹೀಗಾಗಿ ಒಪ್ಪಿ ಆತ್ಮಹತ್ಯೆಗೆ ಮುಂದಾಗುವುದನ್ನು ಪ್ರಚೋದನೆ ಎಂದು ಕಾನೂನು ಪರಿಗಣಿಸುತ್ತದೆ ಎಂದಿದೆ.
ಆತ್ಮಹತ್ಯೆ ಒಪ್ಪಂದ ಪರಸ್ಪರ ಪ್ರೇರಣೆ ಮತ್ತು ಒಟ್ಟಿಗೆ ಸಾಯಲು ಪರಸ್ಪರ ಬದ್ಧತೆಯನ್ನು ಒಳಗೊಂಡಿರುತ್ತದೆ. ಬದುಕುಳಿದವರ ಉಪಸ್ಥಿತಿ ಮತ್ತು ಭಾಗವಹಿಸುವಿಕೆಯು ಸತ್ತವರ ಕ್ರಿಯೆಗಳಿಗೆ ನೇರ ವೇಗವರ್ಧಕವಾಗಿ ಕಾರ್ಯನಿರ್ವಹಿಸಿರುತ್ತದೆ ಎಂದು ಹೇಳಿದೆ.
ಪ್ರಕರಣದಲ್ಲಿ, ರೆಡ್ಡಿ ಕೀಟನಾಶಕದ ಮಾರಕ ಸ್ವಭಾವದ ಬಗ್ಗೆ ತಿಳಿದೇ ಅದನ್ನು ಖರೀದಿಸಿದ್ದಾರೆ ಮತ್ತು ಪ್ರತ್ಯುಷಾ ಜೊತೆ ವಿಷ ಸೇವಿಸಿದ್ದಾರೆ. ಆದರೆ ರೆಡ್ಡಿ ಬದುಕುಳಿದಿದ್ದಾರೆ. ಆತ್ಮಹತ್ಯೆ ಒಪ್ಪಂದದಲ್ಲಿ ಭಾಗವಹಿಸಿ ಅದನ್ನು ಜಾರಿಗೆ ತಂದ ಆರೋಪಿಯ ನಡೆ, ಐಪಿಸಿ ಸೆಕ್ಷನ್ 306ರ ಸಹವಾಚನ ಸೆಕ್ಷನ್ 107 ಅಡಿಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡುವ ಅಪರಾಧ ಎನಿಸಿಕೊಳ್ಳುತ್ತದೆ ಎಂದಿರುವ ಪೀಠ ಪ್ರತ್ಯುಷಾಗೆ ವಿಷಪ್ರಾಶನ ನಡೆದಿದೆ ಎಂದು ಪ್ರಾಸಿಕ್ಯೂಷನ್ ಸ್ಪಷ್ಟವಾಗಿ ಸಾಬೀತುಪಡಿಸಿದೆ. ರೆಡ್ಡಿಯನ್ನು ಹೊಣೆಗಾರರನ್ನಾಗಿ ಮಾಡಲು ಅಗತ್ಯ ಕಾನೂನು ಷರತ್ತುಗಳನ್ನು ಪೂರೈಸಲಾಗಿದೆ ಎಂದು ವಿವರಿಸಿತು.
ಹೈಕೋರ್ಟ್ ಪ್ರಕರಣವನ್ನು ನಿಭಾಯಿಸಿದ ರೀತಿಯನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ ಎಂದು ಪೀಠ ಹೇಳಿದೆ. ಆದರೆ ಇದು ಕತ್ತುಹಿಸುಕಿ ನಡೆಸಿದ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ. ಬದಲಿಗೆ ವಿಷಪ್ರಯೋಗ ನಡೆದಿರುವುದು ಸ್ಪಷ್ಟವಾಗಿದೆ ಎಂದ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದ ಎರಡೂ ಮೇಲ್ಮನವಿಗಳನ್ನು ವಜಾಗೊಳಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರೆಡ್ಡಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿಯಿತು. ಉಳಿದ ಶಿಕ್ಷೆ ಅನುಭವಿಸುವುದಕ್ಕಾಗಿ ರೆಡ್ಡಿ ನಾಲ್ಕು ವಾರಗಳಲ್ಲಿ ಶರಣಾಗುವಂತೆ ಆದೇಶಿಸಿತು.
ನಟಿ ಪ್ರತ್ಯುಷಾಳದ್ದು ಆತ್ಮಹತ್ಯೆಯಲ್ಲ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಂದು ಆಕೆಯ ತಾಯಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೆಡ್ಡಿ ವಿರುದ್ಧ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ರೆಡ್ಡಿಯನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ, ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ನಂತರ ಹೈಕೋರ್ಟ್ ರೆಡ್ಡಿ ವಿರುದ್ಧದ ದೋಷಾರೋಪವನ್ನು ಎತ್ತಿಹಿಡಿದಿತ್ತು. ಐದು ವರ್ಷಗಳ ಕಾಲ ವಿಧಿಸಲಾಗಿದ್ದ ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿ ದಂಡದ ಮೊತ್ತ ಹೆಚ್ಚಿಸಲಾಗಿತ್ತು. ಈ ತೀರ್ಪುಗಳ ವಿರುದ್ಧ ರೆಡ್ಡಿ ಹಾಗೂ ಪ್ರತ್ಯುಷಾ ತಾಯಿ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ರೆಡ್ಡಿ ತನ್ನ ವಿರುದ್ಧದ ದೋಷಾರೋಪ ಪ್ರಶ್ನಿಸಿದರೆ ಪ್ರತ್ಯುಷಾಳ ತಾಯಿ ಶಿಕ್ಷೆ ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್ ಇದೀಗ ನೀಡಿರುವ ತೀರ್ಪು 23 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಅಂತ್ಯ ಹಾಡಿದೆ.
[ತೀರ್ಪಿನ ಪ್ರತಿ]