![[ಕಾಲ್ತುಳಿತ] ಆರ್‌ಸಿಬಿ ಸೇವಕರಂತೆ ಅಮಾನತುಗೊಂಡ ಪೊಲೀಸರಿಂದ ಕೆಲಸ ಎಂದ ಸರ್ಕಾರ; ಹರಕೆ ಕುರಿ ಮಾಡಲಾಗಿದೆ ಎಂದ ಧ್ಯಾನ್](http://media.assettype.com/barandbench-kannada%2F2025-07-17%2Fa6xobgq7%2FWhatsApp-Image-2025-07-02-at-11.46.27.jpeg?w=480&auto=format%2Ccompress&fit=max)
“ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಕಳೆದ ತಿಂಗಳು ಸಂಭವಿಸಿದ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಅಧಿಕಾರಿಗಳು ಆರ್‌ಸಿಬಿಯ ಸೇವಕರಂತೆ ಕೆಲಸ ಮಾಡಿದ್ದು, ಅವರ ನಡೆಯು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ” ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಅಧಿಕಾರಿಗಳ ಅಮಾನತನ್ನು ಸಮರ್ಥಿಸಿಕೊಂಡಿತು.
ಪೊಲೀಸ್ ಅಧಿಕಾರಿಗಳ ಅಮಾನತು ಬದಿಗೆ ಸರಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಹಾಗೂ ಸಿಎಟಿ ಆದೇಶದಲ್ಲಿ ದುರ್ಘಟನೆಗೆ ತಾನೇ ಕಾರಣ ಎಂದಿರುವ ಅಂಶಗಳನ್ನು ಅಳಿಸಿ ಹಾಕುವಂತೆ ಕೋರಿರುವ ಆರ್‌ಸಿಬಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಟಿ ಎಂ ನದಾಫ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಪಿ ಎಸ್ ರಾಜಗೋಪಾಲ್ ಮತ್ತು ರೊಬೆನ್ ಜಾಕಬ್ ಅವರು “ಗುಜರಾತ್‌ನ ಅಹಮದಾಬಾದ್‌ನಲ್ಲಿ ಐಪಿಎಲ್ ಫೈನಲ್ ಪಂದ್ಯ ಪೂರ್ಣಗೊಳ್ಳುವ ಮುನ್ನವೇ ಆರ್‌ಸಿಬಿಯು ಉದ್ದೇಶಿತ ವಿಜಯೋತ್ಸವ ಆಚರಿಸುವುದಕ್ಕೆ ಸಂಬಂಧಿಸಿದ ಅನುಮತಿ ಕೋರಿ ಪೊಲೀಸರಿಗೆ ಮನವಿ ಸಲ್ಲಿಸಿತ್ತು. ಇದರ ಬೆನ್ನಿಗೇ, ಸಾರ್ವಜನಿಕ ಕಾರ್ಯಕ್ರಮಕ್ಕೆ ಯಾರು ಅನುಮತಿಸಿದ್ದಾರೆ ಎಂದೂ ಕೇಳದೆ ಅಧಿಕಾರಿಗಳು ಆರ್‌ಸಿಬಿಯ ಸೇವಕರಂತೆ ಕೆಲಸ ಆರಂಭಿಸಿದ್ದರು” ಎಂದು ಆಕ್ಷೇಪಿಸಿದರು.
“ವಿಜಯೋತ್ಸವಕ್ಕೆ ನೀವು (ಆರ್‌ಸಿಬಿ ಮ್ಯಾನೇಜ್‌ಮೆಂಟ್) ಅನುಮತಿ ಪಡೆದಿಲ್ಲ ಎಂದು ಐಪಿಎಸ್ ಅಧಿಕಾರಿಗಳು ನೇರವಾಗಿ ಆರ್‌ಸಿಬಿಗೆ ಹೇಳಬಹುದಿತ್ತು. ಆಗ ಆರ್‌ಸಿಬಿಯು ಹೈಕೋರ್ಟ್ ಮುಂದೆ ಬರುತ್ತಿತ್ತು, ಆನಂತರ ಕಾನೂನು ತನ್ನ ಕೆಲಸ ಮಾಡುತ್ತಿತ್ತು” ಎಂದರು.
“18 ವರ್ಷಗಳ ಬಳಿಕ ಆರ್‌ಸಿಬಿಯು ಕಪ್ ಗೆದ್ದಿದ್ದು, ಭಾವನಾತ್ಮಕವಾಗಿ ಅಭಿಮಾನಿಗಳಲ್ಲಿ ಅಪಾರ ಸಂತೋಷ ಉಂಟು ಮಾಡಿದ್ದು, ಜನರು ಸಮರೋಪಾದಿಯಲ್ಲಿ ವಿಜಯೋತ್ಸವ ಕಾರ್ಯಕ್ರಮಕ್ಕೆ ದಾಂಗುಡಿ ಇಟ್ಟಿದ್ದರು. ಅದಾಗ್ಯೂ, ಸುರಕ್ಷತೆಯಿಂದ ಇರುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅಥವಾ ಮೇಲಿನ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸುವಲ್ಲಿ ಸಂಬಂಧಿತ ಪೊಲೀಸರು ವಿಫಲರಾದರು. ಇದರಿಂದ ಸಾರ್ವಜನಿಕ ಮುಜುಗರ ಮತ್ತು ನಿರ್ವಹಣಾ ವೈಫಲ್ಯಕ್ಕೆ ಕಾರಣವಾಯಿತು. ಅಧಿಕಾರಿಗಳ ಕಡೆಯಿಂದ ಕರ್ತವ್ಯ ಲೋಪವಾಗಿದೆ” ಎಂದರು.
“ವಿಜಯೋತ್ಸವ ಕಾರ್ಯಕ್ರಮಕ್ಕೆ ಸಮರೋಪಾದಿಯಲ್ಲಿ ಬಂದ ಜನರಿಗೆ 12 ಗಂಟೆಗಳಲ್ಲಿ ವ್ಯವಸ್ಥೆ ಮಾಡುವುದು ಅಸಾಧ್ಯವಾಗಿದ್ದು, ಈ ಕಡಿಮೆ ಅವಧಿಯಲ್ಲಿ ಅಮಾನತುಗೊಂಡಿರುವ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಂಡಿಲ್ಲ. ಪೊಲೀಸ್ ಕಾಯಿದೆಯ ಸೆಕ್ಷನ್ 35ರ ಅನ್ವಯ ಎಲ್ಲಾ ಕ್ರಮಕೈಗೊಳ್ಳುವ ಅಧಿಕಾರ ಪೊಲೀಸರಿಗೆ ಇದ್ದು, ಅದನ್ನು ಮಾಡಲು ಅವರು ವಿಫಲರಾಗಿದ್ದರು” ಎಂದರು.
“ಹಿರಿಯ ಅಧಿಕಾರಿಗಳಿಂದ ಯಾವುದೇ ಸಲಹೆ-ಸೂಚನೆ ಪಡೆಯಲಾಗಿಲ್ಲ. ಉನ್ನತಾಧಿಕಾರಿಗಳ ಜೊತೆ ಚರ್ಚಿಸದೇ ಇರುವುದೇ ಸಮಸ್ಯೆಯ ಮೂಲವಾಗಿದೆ. ಅಮಾನತುಗೊಂಡಿರುವ ಅಧಿಕಾರಿಗಳಿಗೆ ಯಾವುದೇ ಶಿಕ್ಷೆ ವಿಧಿಸಲಾಗಿಲ್ಲ, ಅಪಹಾಸ್ಯವಾಗುವ ಹಿನ್ನೆಲೆಯಲ್ಲಿ ಅವರನ್ನು ತಾತ್ಕಾಲಿಕ ಕ್ರಮದ ಭಾಗವಾಗಿ ಹೊರಗಿಡಲಾಗಿದೆ” ಎಂದರು.
ಕ್ರೀಡಾಂಗಣದ ಒಳಭಾಗದಲ್ಲಿ ವ್ಯವಸ್ಥೆ ಕಲ್ಪಿಸುವುದಕ್ಕೆ ಕಾರಣ ಯಾರು ಎಂಬ ಪೀಠದ ಪ್ರಶ್ನೆಗೆ ರಾಜಗೋಪಾಲ್ ಅವರು “ರಾಜ್ಯದ ಪೊಲೀಸರು” ಎಂದರು. ದುರ್ಘಟನೆ ಸಂಭವಿಸಿರುವುದನ್ನು ನೋಡಿದರೆ ಮಾಡಲಾಗಿದ್ದ ವ್ಯವಸ್ಥೆ ಸಾಲದು ಎಂಬುದನ್ನು ಒತ್ತಿಹೇಳುತ್ತದೆ” ಎಂದರು.
ಸಿಎಟಿ ಆದೇಶದಲ್ಲಿ ಪೊಲೀಸರೂ ಮನುಷ್ಯರು, ಅವರು ದೇವರು ಅಥವಾ ಮಂತ್ರವಾದಿಗಳಲ್ಲ ಎಂಬುದಕ್ಕೆ ಆಕ್ಷೇಪಿಸಿದ ರಾಜಗೋಪಾಲ್ ಅವರು “ಇದೊಂದು ಅಮೋಘ ವಿಚಾರ. ಇದನ್ನು ತಾತ-ಅಜ್ಜಿಯರು ತಮ್ಮ ಮೊಮ್ಮಕ್ಕಳಿಗೆ ಹೇಳಬಹುದೇ ವಿನಾ ನ್ಯಾಯ ಮಂಡಳಿಯು ದಾವೆದಾರರಿಗೆ ಹೇಳುವಂಥದ್ದಲ್ಲ” ಎಂದು ಕಿಚಾಯಿಸಿದರು. ಸಿಎಟಿಯು ಪೊಲೀಸ್ ಒಕ್ಕೂಟದ ಪರವಾಗಿ ಮಾತನಾಡುತ್ತಿದೆಯೇ ಅಥವಾ ತನ್ನ ಮುಂದಿರುವ ಪ್ರಕರಣದ ಬಗ್ಗೆ ಮಾತನಾಡುತ್ತಿದೆಯೋ ತಿಳಿಯದಾಗಿದೆ ಎಂದು ಕುಹಕವಾಡಿದರು.
ವಿಕಾಸ್ ಕುಮಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು “ಕಾಲ್ತುಳಿತದಂಥ ದುರ್ಘಟನೆಗೆ ಯಾರನ್ನಾದರೂ ಹೊಣೆ ಮಾಡಬೇಕಿತ್ತು ಅದಕ್ಕಾಗಿ ವಿಕಾಸ್ ಕುಮಾರ್ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಯಾರನ್ನಾದರೂ ಹರಕೆಯ ಕುರಿ ಮಾಡಬೇಕಿತ್ತು, ಇದಕ್ಕಾಗಿ ಸರ್ಕಾರವು ಪ್ರಮುಖ ಅಧಿಕಾರಿಗಳನ್ನು ಆಯ್ದುಕೊಂಡಿದೆ” ಎಂದರು.
“ಸರ್ಕಾರದ ಪ್ರಮುಖರು ಆರ್‌ಸಿಬಿ ತಂಡವನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ವಿಧಾನ ಸೌಧದ ಮುಂಭಾಗ ಆಟಗಾರರನ್ನು ಸನ್ಮಾನಿಸಲಾಗಿದೆ. ಆನಂತರ ಅವರನ್ನು ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿದ್ದು, ದುರ್ಘಟನೆ ಸಂಭವಿಸಿದೆ. ಈ ದುರ್ಘಟನೆಯು 5-10 ನಿಮಿಷದಲ್ಲಿ ನಡೆದು ಹೋಗಿದೆ. ಇಂಥ ದುರ್ಘಟನೆಯು ಬೆಂಗಳೂರಿನಲ್ಲಿ ಹಿಂದೆಂದೂ ನಡೆದಿಲ್ಲ. ಈ ಕುರಿತು ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಇದನ್ನು ಮಾಡಬಹುದಿತ್ತು, ಅದನ್ನು ಮಾಡಬಹುದಿತ್ತು ಎನ್ನಲಾಗಿದೆ… ಏನೆಲ್ಲಾ ಮಾಡಬಹುದಿತ್ತೋ, ಅದೆಲ್ಲವನ್ನೂ ಮಾಡಲಾಗಿತ್ತು” ಎಂದರು.
“ಅಮಾನತು, ಶಿಕ್ಷೆಯ ಪ್ರಮಾಣವಾಗಿದ್ದು, ಅದನ್ನು ಹಾಲಿ ಪ್ರಕರಣದಲ್ಲಿ ಮಾಡಿರುವಂತೆ ಮಾಡಲಾಗದು. ಅಮಾನತು ಆದೇಶದಲ್ಲಿ ಹೊಣೆಗಾರಿಕೆಯ ಬಗ್ಗೆ ಮಾತನಾಡಲಾಗಿದೆಯೇ ವಿನಾ ಕರ್ತವ್ಯ ಲೋಪದ ಬಗ್ಗೆಯಲ್ಲ. ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ ಬಳಿಕ ಪೊಲೀಸರನ್ನು ಅಮಾನತು ಮಾಡಲಾಗಿದೆ. ಸರ್ಕಾರದ ನಿಲುವು ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ, ಅವರನ್ನು ಹರಕೆಯ ಕುರಿಯನ್ನಾಗಿ ಮಾಡುವುದಾಗಿದೆ” ಎಂದರು.
“ಶಿಸ್ತುಪಾಲನಾ ತನಿಖೆಯನ್ನು ನಡೆಸದೇ ಹೊಣೆಗಾರಿಕೆ ಹಿನ್ನೆಲೆಯಲ್ಲಿ ಅಮಾನತು ಮಾಡುವುದರಾದರೆ ಅದು ದಂಡನಾರ್ಹ ಕ್ರಮವಾಗುತ್ತದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಯಾರೋ ಒಬ್ಬರನ್ನು ಅಮಾನತು ಮಾಡಿ ಹೊಣೆಗಾರಿಕೆಯನ್ನು ಸರ್ಕಾರ ಸಾಧಿಸಲಾಗದು. ಸರ್ಕಾರದ ಆದೇಶದಲ್ಲಿ ಹೊಣೆಗಾರಿಕೆಯನ್ನು ಖಾತರಿಪಡಿಸಲು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ. ದುರಂತದ ಬಳಿಕ ಅರ್ಧಕ್ಕೆ ಜನರು ಕ್ರೀಡಾಂಗಣ ತೊರೆಯದಂತೆ, ಸುಸೂತ್ರವಾಗಿ ಜನರು ಅಲ್ಲಿಂದ ತೆರಳುವಂತೆ ಪೊಲೀಸರು ಮಾಡಿದ್ದರು” ಎಂದರು.
ಆರ್‌ಸಿಬಿ ಪರವಾಗಿ ವಾದಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು “ಪ್ರಕರಣದಲ್ಲಿ ತಾನು ಪಕ್ಷಕಾರನಾಗಿ ಇಲ್ಲದಿದ್ದರೂ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದು ಹಾಲಿ ತನಿಖೆಯಲ್ಲಿ ತನ್ನ ಮೇಲೆ ಪರಿಣಾಮ ಉಂಟು ಮಾಡಲಿದೆ. ಹೀಗಾಗಿ, ಆಕ್ಷೇಪಾರ್ಹ ಅಂಶಗಳನ್ನು ಅಳಿಸಿ ಹಾಕಬೇಕು” ಎಂಬ ಮನವಿಗೆ ತಮ್ಮ ವಾದ ಸೀಮಿತಗೊಳಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.