ಕ್ಷಮೆಯಾಚನೆಗೆ ಮುಂದಾದ ರಾಘವ್ ಚಡ್ಡಾ; ಸಭಾಧ್ಯಕ್ಷರು ಸಹಾನುಭೂತಿಯಿಂದ ಪ್ರಕರಣ ಪರಿಗಣಿಸಲಿ ಎಂದ ಸುಪ್ರೀಂ ಕೋರ್ಟ್‌

ಸದನದ ಅತ್ಯಂತ ಕಿರಿಯ ಸದಸ್ಯರಾಗಿರುವ ಚಡ್ಡಾ ಕ್ಷಮೆಯಾಚಿಸುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಚಡ್ಡಾ ಅವರ ಪರ ವಕೀಲರು ಪೀಠಕ್ಕೆ ತಿಳಿಸಿದರು.
Raghav Chadha and supreme court
Raghav Chadha and supreme court
Published on

ನಕಲಿ ಸಹಿ ಆರೋಪದ ಪ್ರಕರಣದಲ್ಲಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್‌ ಅವರನ್ನು ಬೇಷರತ್ ಕ್ಷಮೆಯಾಚಿಸುವುದಾಗಿ ರಾಜ್ಯಸಭೆಯಿಂದ ಅಮಾನತುಗೊಂಡಿರುವ ಸದಸ್ಯ ರಾಜೀವ್‌ ಚಡ್ಡಾ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದ್ದಾರೆ [ರಾಜೀವ್‌ ಚಡ್ಡಾ ಮತ್ತು ರಾಜ್ಯಸಭಾ ಸೆಕ್ರೆಟರಿಯೇಟ್‌ ಇನ್ನಿತರರ ನಡುವಣ ಪ್ರಕರಣ].

ದೆಹಲಿ ಸೇವೆಗಳ ಮಸೂದೆಯ ಕುರಿತಾಗಿ ಅಧ್ಯಯನ ನಡೆಸಲು ಸ್ಥಾಯಿ ಸಮಿತಿಯೊಂದನ್ನು ರಚಿಸಬೇಕು ಎಂದು ಒತ್ತಾಯಿಸಿ ನಿರ್ಣಯ ಮಂಡಿಸಲು ರಾಘವ್‌ ಚಡ್ಡಾ ಅವರು ಐವರು ರಾಜ್ಯಸಭಾ ಸದಸ್ಯರ ಸಮ್ಮತಿ ಪಡೆಯದೆ ಅವರ ಸಹಿ ನಕಲು ಮಾಡಿದ್ದರು ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.

ಸದನದ ಅತ್ಯಂತ ಕಿರಿಯ ಸದಸ್ಯನಾದ ತಾನು ಕ್ಷಮೆ ಯಾಚಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಚಡ್ಡಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸದನದ ಘನತೆಗೆ ಧಕ್ಕೆ ತರುವ ಉದ್ದೇಶ ಚಡ್ಡಾ ಅವರಿಗೆ ಇರಲಿಲ್ಲ ಎಂದು ಹೇಳಿಕೆ ಸಲ್ಲಿಸಲಾಗಿದೆ ಎಂದಿರುವ ಸಿಜೆಐ ಡಿ ವೈ ಚಂದ್ರಚೂಡ್‌ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು "ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸದನದ ಕಿರಿಯ ಸದಸ್ಯರರಾದ ಚಡ್ಡಾ ಅವರ ಕ್ಷಮೆಯಾಚನೆಯನ್ನು ಪ್ರಕರಣದ ಸಂದರ್ಭ ಸನ್ನಿವೇಶದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಧ್ಯಕ್ಷರು ಸಹಾನುಭತಿಯಿಂದ ಪರಿಗಣಿಸಬೇಕು" ಎಂದು ಸಭಾದ್ಯಕ್ಷರಾದ ಜಗದೀಪ್‌ ಧನ್‌ಕರ್‌ ಅವರಿಗೆ ಕಿವಿಮಾತು ಹೇಳಿದೆ.  

ದೀಪಾವಳಿ ವಿರಾಮದ ನಂತರ ಪ್ರಕರಣದ ವಿಚಾರಣೆ ನಡೆಯಲಿದ್ದು, ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮತ್ತು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಪ್ರಕರಣದ ಬೆಳವಣಿಗೆಗಳನ್ನು ನ್ಯಾಯಾಲಯಕ್ಕೆ ತಿಳಿಸಲು ಸೂಚಿಸಲಾಗಿದೆ. ಚಡ್ಡಾ ಪರವಾಗಿ ಶಾದನ್‌ ಫರಾಸತ್‌ ವಾದ ಮಂಡಿಸಿದರು.

Also Read
ರಾಜ್ಯಸಭೆಯಿಂದ ಅಮಾನತು: ಸುಪ್ರೀಂ ಕೋರ್ಟ್ ಎಡತಾಕಿದ ಎಎಪಿ ಸಂಸದ ರಾಘವ್ ಚಡ್ಡಾ

ತಮ್ಮ ಅಮಾನತು ಪ್ರಶ್ನಿಸಿ ಚಡ್ಡಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ದೆಹಲಿ ಸೇವೆಗಳ ಮಸೂದೆಯ ಕುರಿತಾಗಿ ಅಧ್ಯಯನ ನಡೆಸಲು ಸ್ಥಾಯಿ ಸಮಿತಿಯೊಂದನ್ನು ರಚಿಸಬೇಕು ಎಂದು ಒತ್ತಾಯಿಸಿ ನಿರ್ಣಯ ಮಂಡಿಸಲು ಚಡ್ಡಾ ಅವರು ಐವರು ರಾಜ್ಯಸಭಾ ಸದಸ್ಯರ ಸಹಿಯನ್ನು ನಕಲು ಮಾಡಿದ್ದರು ಎನ್ನುವುದು ಅವರ ವಿರುದ್ಧ ಕೇಳಿಬಂದಿರುವ ಆರೋಪ. ಈ ಹಿನ್ನೆಲೆಯಲ್ಲಿ ಅವರನ್ನು ಆಗಸ್ಟ್ 11ರಂದು ಸಂಸತ್ತಿನ ಮೇಲ್ಮನೆಯಿಂದ ಅಮಾನತುಗೊಳಿಸಲಾಗಿತ್ತು.

ತಮ್ಮ ಅಮಾನತು ರಾಜ್ಯಗಳ ಪರಿಷತ್‌ (ರಾಜ್ಯಸಭೆ) ಕಾರ್ಯವಿಧಾನ ಮತ್ತು ನಡಾವಳಿ ನಿಯಮಾವಳಿಗಳ ಮತ್ತು ಸಂವಿಧಾನದ  14 ಮತ್ತು 21ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಚಡ್ಡಾ ವಾದಿಸಿದ್ದರು.

Kannada Bar & Bench
kannada.barandbench.com