'ಪ್ರಚೋದನಕಾರಿ' ಹೇಳಿಕೆ: ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋದ ಸುವೇಂದು ಅಧಿಕಾರಿ

ಪ್ರಕರಣವನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠದೆದುರು ಪ್ರಸ್ತಾಪಿಸಿದಾಗ ಆಗಸ್ಟ್ 4 ರಂದು ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
Suvendu Adhikari, Supreme Court
Suvendu Adhikari, Supreme Court
Published on

ಈಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ವೇಳೆ ದ್ವೇಷ ಭಾಷಣಕ್ಕೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಲು ಅನುಮತಿಸಿದ ಕಲ್ಕತ್ತಾ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠದೆದುರು ಅರ್ಜಿಯನ್ನು ಇಂದು ವಕೀಲ ಬಾನ್ಸುರಿ ಸ್ವರಾಜ್ ಪ್ರಸ್ತಾಪಿಸಿದಾಗ ನ್ಯಾಯಮೂರ್ತಿಗಳು ಆಗಸ್ಟ್ 4ರಂದು ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ಸುವೇಂದು ಅನಿಶ್ಚಿತ ಪರಿಸ್ಥಿತಿಯಲ್ಲಿದ್ದಾರೆ ಎಂದು ಸ್ವರಾಜ್‌ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಆಗ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ನ್ಯಾ. ಕೌಲ್‌ ಭರವಸೆಯಿತ್ತರು.

Also Read
ಸುವೇಂದು ಅಧಿಕಾರಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್

ನ್ಯಾಯಲಯಕ್ಕೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ದೂರಿನ ರೂಪದಲ್ಲಿ ಪರಿಗಣಿಸುವಂತೆ ಕಲ್ಕತ್ತಾ ಹೈಕೋರ್ಟ್‌ ಪ. ಬಂಗಾಳ ಪೊಲೀಸರಿಗೆ ಜುಲೈ 20ರಂದು ನೀಡಿದ್ದ ಆದೇಶದಲ್ಲಿ ನಿರ್ದೇಶಿಸಿತ್ತು. ಸುವೇಂದು ಅವರಿಗೆ ಸಂಬಂಧಿಸಿದಂತೆ  ಎಫ್‌ಐಆರ್ ದಾಖಲಿಸುವುದನ್ನು ತಡೆಯುವ ಆದೇಶ ನೀಡುವಾಗ ನ್ಯಾ. ರಾಜಶೇಖರ್‌ ಮಂಥ ಅವರಿದ್ದ ಪೀಠ ಎಡವಿದೆ ಎಂದು ನ್ಯಾಯಮೂರ್ತಿಗಳಾದ ಐ ಪಿ ಮುಖರ್ಜಿ ಮತ್ತು ಬಿಸ್ವರೂಪ್ ಚೌಧರಿ ಅವರಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ನುಡಿದಿತ್ತು.

ಹೀಗಾಗಿ ಸುವೇಂದು ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ತಾವು ಬಿಜೆಪಿಯಿಂದ ಟಿಕೆಟ್‌ ಪಡೆದು ಗೆದ್ದಂದಿನಿಂದ ತಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳ ಸುರಿಮಳೆಯಾಗುತ್ತಿದೆ. ತಮಗೆ ವಾದ ಮಂಡಿಸಲು ಅವಕಾಶ ನೀಡದೆ ಹೈಕೋರ್ಟ್‌ ತೀರ್ಪು ನೀಡಿದೆ ಎಂದು ಅವರು ಆರೋಪಿಸಿದ್ದಾರೆ.

Kannada Bar & Bench
kannada.barandbench.com