

ಸ್ವದೇಶಿ ನ್ಯಾಯತತ್ವ ಎಂಬುದು ಜಾಗತಿಕ ಕಾನೂನು ಕಲ್ಪನೆಗಳೊಂದಿಗೆ ಸಂವಾದಿಸುವ ಭಾರತೀಯ ಸಂವಿಧಾನತ್ಮಕತೆಯ ಆತ್ಮವಿಶ್ವಾಸದ ಧ್ಯೋತಕವಾಗಿದೆ. ಆದರೆ ಭಾರತದ ಸಂವಿಧಾನದ ಪಠ್ಯ, ತತ್ವಗಳು ಹಾಗೂ ಸಾಮಾಜಿಕ ವಾಸ್ತವಗಳಿಗೆ ಹೊಂದಿಕೆಯಾಗದ ವಿದೇಶಿ ಸಿದ್ಧಾಂತಗಳ ಅಂಧಾನುಕರಣೆಯನ್ನು ಅದು ದೃಢವಾಗಿ ತಿರಸ್ಕರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಶುಕ್ರವಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಪಾಲ್ಖಿವಾಲಾ ಪ್ರತಿಷ್ಠಾನ ಮತ್ತು ಷಿಕಾಗೋ ವಿವಿ ದೆಹಲಿ ಕೇಂದ್ರ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ನ್ಯಾಯಾಲಯಗಳು ಆತ್ಯಂತಿಕವಾಗಿ ಭಾರತದ ಸಂವಿಧಾನವನ್ನೇ ವ್ಯಾಖ್ಯಾನಿಸುತ್ತವೆ ಎಂದು ಒತ್ತಿ ಹೇಳಿದರು. ತುಲನಾತ್ಮಕ ನ್ಯಾಯಶಾಸ್ತ್ರವನ್ನು ನಮ್ಮ ಸಾಮಾಜಿಕ ಪರಿಸರ, ಸ್ಥಾಪಿತ ತತ್ವಗಳು ಹಾಗೂ ಸಂವಿಧಾನದ ಪಠ್ಯಕ್ಕೆ ಹೊಂದಿಕೊಳ್ಳುವ ಮಟ್ಟಿಗೆ ಮಾತ್ರ ಬಳಸಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದೇಶದ ಅತ್ಯುನ್ನತ ಕಾನೂನು ಅಧಿಕಾರಿ ಆಗಿರುವ ಅಟಾರ್ನಿ ಜನರಲ್ ಆರ್. ವೆಂಕಟ್ರಮಣಿ, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ, ಷಿಕಾಗೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಾಮ್ ಗಿನ್ಸ್‌ಬರ್ಗ್ ಹಾಗೂ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಕೀಲರಾದ ಪಾಯಲ್ ಚಾವ್ಲಾ ನಿರ್ವಹಿಸಿದರು.
ಸಂವಿಧಾನಾತ್ಮಕ ವ್ಯಾಖ್ಯಾನವು ನಿರಂತರವಾಗಿ ವಿಕಾಸಗೊಳ್ಳುವ ಪ್ರಕ್ರಿಯೆಯಾಗಿದ್ದು, ಅದನ್ನು ಪೂರ್ಣಗೊಂಡ ಅಥವಾ ಮುಚ್ಚಿದ ಕಾರ್ಯವೆಂದು ಭಾವಿಸಲಾಗದು. ಸಂವಿಧಾನವನ್ನು ವ್ಯಾಖ್ಯಾನಿಸುವಾಗ ‘ಇಷ್ಟೇ ಸಾಕು’ಎಂದು ಹೇಳಲಾಗದು. ಅದನ್ನು ಜಡಗೊಳಿಸಲು ಸಾಧ್ಯವಿಲ್ಲ. ಅದು ಒಂದು ಸಜೀವ ಕಾನೂನು ಎಂದು ನ್ಯಾ. ವಿಶ್ವನಾಥನ್ ಬಣ್ಣಿಸಿದರು.
ಭವಿಷ್ಯದ ಸವಾಲುಗಳು ಯಾವ ರೀತಿಯಲ್ಲಿ ಎದುರಾಗುತ್ತವೆ ಎಂಬುದು ಅನಿಶ್ಚಿತವಾಗಿರುತ್ತದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆಯ (ಎಐ) ಯುಗದಲ್ಲಿ ಸಹಜ ಅಂಶ ಎಷ್ಟರ ಮಟ್ಟಿಗೆ ಪರೀಕ್ಷೆಗೆ ಒಳಗಾಗುತ್ತವೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಸಂವಿಧಾನಾತ್ಮಕ ಸಿದ್ಧಾಂತಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳು ಸ್ಥಿರವಾಗಿರಲಾರವು ಎಂದರು.
ದೇಶದ ಅತ್ಯುನ್ನತ ಕಾನೂನು ಅಧಿಕಾರಿ ಆಗಿರುವ ಅಟಾರ್ನಿ ಜನರಲ್ ಆರ್. ವೆಂಕಟ್ರಮಣಿ ಅವರು ಮಾತನಾಡಿ ಭಾರತೀಯ ನ್ಯಾಯತತ್ವ ಚಾರಿತ್ರಿಕವಾಗಿ ಅನೇಕ ದೇಶಗಳ ಕಾನೂನು ಕಲ್ಪನೆಗಳೊಂದಿಗೆ ಸಂವಾದ ನಡೆಸಿಕೊಂಡು ಬಂದಿದೆ ಎಂದು ಹೇಳಿದರು.
ಪ್ರತಿಯೊಂದು ಸಿದ್ಧಾಂತಕ್ಕೂ ಮತ್ತು ಸಂಸ್ಥೆಗೂ ಹಿಗ್ಗುವ ಸ್ವಭಾವ ಇರುತ್ತದೆ; ಹಿಗ್ಗದೆ ಹೋದಲ್ಲಿ ಅವು ಸ್ಥಗಿತಗೊಂಡುಬಿಡುತ್ತವೆ. ವಿಭಿನ್ನ ಪರಂಪರೆಗಳಿಂದ ಬಂದ ಕಲ್ಪನೆಗಳೊಂದಿಗೆ ಸಂವಾದ ನಡೆಸುವುದು ಸಂವಿಧಾನಾತ್ಮಕ ಅರಿವನ್ನು ದುರ್ಬಲಗೊಳಿಸುವುದಲ್ಲ, ಬದಲಾಗಿ ಅದನ್ನು ಮತ್ತಷ್ಟು ಸಮೃದ್ಧಗೊಳಿಸುತ್ತದೆ. ಸಂವಿಧಾನಾತ್ಮಕ ವ್ಯಾಖ್ಯಾನವನ್ನು ಮುಚ್ಚಿದ ಅಥವಾ ಸೀಮಿತ ಪ್ರಕ್ರಿಯೆಯಾಗಿಸಬಾರದು ಎಂದು ಅವರು ಕಿವಿಮಾತು ಹೇಳಿದರು.