ದೆಹಲಿಯಲ್ಲಿ ರಾತ್ರಿ ವೇಳೆ ಮಹಿಳೆಯರಿಗೆ ಇರುವ ಸುರಕ್ಷತೆಯನ್ನು ಪರೀಕ್ಷಿಸುತ್ತಿದ್ದ ದೆಹಲಿ ಮಹಿಳಾ ಆಯೋಗದ (ಡಿ ಸಿ ಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಅವರನ್ನು ಕುಡಿದ ಮತ್ತಿನಲ್ಲಿ ಕಾರಿನಲ್ಲಿ ಕೆಲ ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದ್ದ ಆರೋಪಿ ಹರೀಶ್ ಚಂದರ್‌ಗೆ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.
ನಗರದ ಸಂಗಮ್ ವಿಹಾರ್ ನಿವಾಸಿ ಹರೀಶ್ ಚಂದರ್‌ಗೆ ಜಾಮೀನು ನೀಡುವಾಗ ಸಾಕೇತ್ ನ್ಯಾಯಾಲಯ ಸಂಕೀರ್ಣದಲ್ಲಿರುವ ಮಹಿಳಾ ನ್ಯಾಯಾಲಯದ ಮೆಟ್ರೊಪಾಲಿಟನ್ ನ್ಯಾಯಾಧೀಶೆ ಸಂಘಮಿತ್ರಾ ಅವರು “ಆರೋಪಿ ಸಾಕ್ಷಿಗಳಿಗೆ ಬೆದರಿಕೆಹಾಕಬಹುದು ಅಥವಾ ಸಾಕ್ಷ್ಯ ನಾಶ ಮಾಡಬಹುದು ಎಂಬ ಯಾವುದೇ ಆತಂಕಗಳು ಈ ಹಂತದಲ್ಲಿ ಸಾಬೀತಾಗಿಲ್ಲ” ಎಂದರು. ಚಂದರ್‌ಗೆ ₹ 50,000 ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ ಒದಗಿಸುವಂತೆ ಸೂಚಿಸಿ ಜಾಮೀನು ನೀಡಲಾಯಿತು.
ಜಾಮೀನು ನೀಡಬೇಕೆ ವಿನಾ ಜೈಲು ಶಿಕ್ಷೆಯನ್ನಲ್ಲ. ಒಂದು ಆರೋಪ ಹೊರತುಪಡಿಸಿ ಉಳಿದವು ಜಾಮೀನು ನೀಡಬಹುದಾದ ಸ್ವರೂಪದ್ದಾಗಿವೆ. ಈ ಅಪರಾಧಗಳು ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ವಿಧಿಸುವಂತಹದ್ದಾಗಿವೆ ಎಂಬ ಅಂಶಗಳನ್ನು ನ್ಯಾಯಾಲಯ ಗಮನಿಸಿತು.
“ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ, ಆರೋಪಿಯನ್ನು ಕಂಬಿ ಹಿಂದೆ ಇಡುವುದರಿಂದ ಯಾವುದೇಉದ್ದೇಶ ಸಾಕಾರವಾಗುತ್ತದೆ ಎಂದು ಅನ್ನಿಸುವುದಿಲ್ಲ” ಎಂಬುದಾಗಿ ನ್ಯಾಯಾಲಯ ಹೇಳಿತು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಆವರಣದ ಹೊರಭಾಗದಲ್ಲಿದ್ದ ತನಗೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕಿರುಕುಳ ನೀಡಿ ತನ್ನ ಕಾರಿನಲ್ಲಿ 10-15 ಮೀಟರ್ ದೂರ ಎಳೆದೊಯ್ದಿದ್ದಾನೆ ಎಂದು ಮಾಲೀವಾಲ್ ಆರೋಪಿಸಿದ್ದರು.
ಸ್ವಪ್ರೇರಣೆಯಿಂದ ನೋವುಂಟು ಮಾಡುವುದು, ಕ್ರಿಮಿನಲ್ ದಬ್ಬಾಳಿಕೆ ಹಾಗೂ ಪದ ಇಲ್ಲವೇ ಸಂಕೇತಗಳಿಂದ ಮಹಿಳೆಯ ಘನತೆಗೆ ಧಕ್ಕೆ ತರುವುದು, ಅಕ್ರಮ ನಿರ್ಬಂಧ ಹಾಗೂ ಕುಡಿದು ವಾಹನ ಚಲಾಯಿಸಿದ ಅಪರಾಧಗಳಿಗಾಗಿ ಕ್ರಿಮಿನಲ್ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು.