ಮದುವೆ ಎಂಬ ವ್ಯವಸ್ಥೆಯನ್ನು ಹಾಳುಗೆಡವುವ ವ್ಯವಸ್ಥಿತ ತಂತ್ರ ಲಿವ್‌-ಇನ್‌: ಅಲಾಹಾಬಾದ್ ಹೈಕೋರ್ಟ್ ಅಸಮಾಧಾನ

ಸೌಹಾರ್ದಯುತ ಕೌಟುಂಬಿಕ ಸಂಬಂಧ ಹೊಂದಿರದ ವ್ಯಕ್ತಿ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ.
Allahabad High Court with Justice Siddharth
Allahabad High Court with Justice Siddharth
Published on

ಭಾರತದಲ್ಲಿ ಚಲನಚಿತ್ರ, ದೂರದರ್ಶನ ಇತ್ಯಾದಿಗಳ ಮೂಲಕ ಸಹಜೀವನಕ್ಕೆ (ಲಿವ್‌-ಇನ್‌) ಪ್ರಚೋದನೆ ನೀಡಿ ಮದುವೆ ಎಂಬ ಸಾಮಾಜಿಕ ಸಂಸ್ಥೆಯನ್ನು ನಾಶ ಮಾಡುವ ವ್ಯವಸ್ಥಿತ ತಂತ್ರ ನಡೆಯುತ್ತಿದೆ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಅದ್ನಾನ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ವಿವಾಹ ಎಂಬ ಸಾಮಾಜಿಕ ಸಂಸ್ಥೆ ವ್ಯಕ್ತಿಗೆ ಒದಗಿಸುವ ಭದ್ರತೆ, ಸಾಮಾಜಿಕ ಮನ್ನಣೆ, ಪ್ರಗತಿ ಹಾಗೂ ಸ್ಥಿರತೆಯನ್ನು ಲಿವ್‌-ಇನ್‌ ಸಂಬಂಧಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾ. ಸಿದ್ಧಾರ್ಥ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

Also Read
ಲಿವ್‌-ಇನ್‌ ಸಂಬಂಧ ಸುಪ್ರೀಂ ಪ್ರೋತ್ಸಾಹಿಸದು: ಅಂತರ್‌ಧರ್ಮೀಯ ಸಹಜೀವನ ಜೋಡಿ ರಕ್ಷಣೆಗೆ ಅಲಾಹಾಬಾದ್ ಹೈಕೋರ್ಟ್ ನಕಾರ

ಆದರೆ ವೈವಾಹಿಕ ಸಂಬಂಧದಲ್ಲಿ ಸಂಗಾತಿಗೆ ದ್ರೋಹ ಬಗೆಯಲಾಗುತ್ತದೆ, ಮುಕ್ತ ಸಹಜೀವನ ಸಂಬಂಧ ಪ್ರಗತಿಪರ ಸಮಾಜದ ಸಂಕೇತವೆಂದು ಬಿಂಬಿಸುತ್ತಿರುವುದರಿಂದ ದೇಶದ ಯುವಕರು ಅದರತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

“ದೇಶದಲ್ಲಿ ಮದುವೆ ಎಂಬ ಸಂಸ್ಥೆ ಬಳಕೆಗೆ ಬಾರದ ನಂತರವೇ ಸಹಜೀವನ ಸಂಬಂಧವನ್ನು ಸಾಮಾನ್ಯವೆಂದು ಪರಿಗಣಿಸಬೇಕಿದ್ದು ಅಭಿವೃದ್ಧಿ ಹೊಂದಿದ ದೇಶಗಳೆಂದು ಕರೆಯಲಾಗುವ ಅನೇಕ ಕಡೆಗಳಲ್ಲಿ ಮದುವೆ ಎಂಬ ಸಂಸ್ಥೆಯನ್ನು ರಕ್ಷಿಸುವುದು ದೊಡ್ಡ ಸಮಸ್ಯೆಯಾಗಿದೆ. ನಾವು ಭವಿಷ್ಯದಲ್ಲಿ ದೊಡ್ಡದೊಂದು ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲು ಹೊರಟಿದ್ದೇವೆ. ದೇಶದಲ್ಲಿ ಮದುವೆ ಎಂಬ ಸಂಸ್ಥೆಯನ್ನು ನಾಶಪಡಿಸಿ ಸಮಾಜವನ್ನು ಅಸ್ಥಿರಗೊಳಿಸಿ ಆ ಮೂಲಕ ದೇಶದ ಪ್ರಗತಿಗೆ ಅಡ್ಡಿಯುಂಟು ಮಾಡುವ ವ್ಯವಸ್ಥಿತ ತಂತ್ರ ಇದೆ” ಎಂದು ಪೀಠ ನುಡಿದಿದೆ.

ಸೌಹಾರ್ದಯುತ ಕೌಟುಂಬಿಕ ಸಂಬಂಧವನ್ನು ಹೊಂದಿರದ ವ್ಯಕ್ತಿ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಿಲ್ಲ ಎಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿವಾಹವಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದ ಆರೋಪಿಗೆ ಜಾಮೀನು ನೀಡುವ ವೇಳೆ  ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Kannada Bar & Bench
kannada.barandbench.com