ಶನಿವಾರ ತಡರಾತ್ರಿ ನಡೆದ ವಿಚಾರಣೆ ವೇಳೆ, ಪಂಜಾಬ್ ಪೊಲೀಸರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಮೇ 10, 2022ರವರೆಗೆ ಬಂಧಿಸದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿ ಅನೂಪ್ ಚಿತ್ಕಾರ ಅವರು ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ವಕೀಲರ ವಾದ ಆಲಿಸಿದ ಬಳಿಕ ಈ ಆದೇಶ ನೀಡಿದರು. ಎಸ್‌ಎಎಸ್ ನಗರದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರಾವ್ತೇಶ್ ಇಂದರ್‌ಜಿತ್ ಸಿಂಗ್ ಅವರು ಬಿಜೆಪಿ ನಾಯಕನ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿದ್ದ ಬಗ್ಗಾ ಅವರು ತುರ್ತು ಪರಿಹಾರ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು), 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಹಾಗೂ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪಂಜಾಬ್ ಪೊಲೀಸರು ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ʼದಿ ಕಾಶ್ಮೀರ್ ಫೈಲ್ಸ್ʼ ಚಲನಚಿತ್ರದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ವಿರುದ್ಧ ಬಗ್ಗಾ ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತಿದ್ದರು. ಈ ಸಂಬಂಧ ಮೊಹಾಲಿಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು.
ಶುಕ್ರವಾರ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ದೆಹಲಿಯಲ್ಲಿ ಬಂಧಿಸಿ ಪಂಜಾಬ್‌ಗೆ ಕರೆದೊಯ್ಯುತ್ತಿದ್ದರು. ಆಗ ಹರ್ಯಾಣ ಮತ್ತು ದೆಹಲಿ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಮರಳಿ ದೆಹಲಿಗೆ ಕರೆತಂದಿದ್ದರು. ನಂತರ ಪಂಜಾಬ್ ಪೊಲೀಸರು ಬಗ್ಗಾ ವಿರುದ್ಧ ನ್ಯಾಯಾಲಯದಿಂದ ಬಂಧನ ವಾರೆಂಟ್ ತಂದಿದ್ದರು. ಈ ಹಿನ್ನೆಲೆಯಲ್ಲಿ ಬಗ್ಗಾ ಹೈಕೋರ್ಟ್ ಸಂಪರ್ಕಿಸಿದರು. ರಾಜಕೀಯ ದ್ವೇಷದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಸಾಕ್ಷ್ಯವು ವಿದ್ಯುನ್ಮಾನ ಸ್ವರೂಪದ್ದಾಗಿರುವುದರಿಂದ ತನಿಖೆಗಾಗಿ ತನ್ನನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂದು ವಾದಿಸಿದ್ದರು. ಅಲ್ಲದೆ ತಾವು ವಿದೇಶಕ್ಕೆ ತೆರಳುವ ಪ್ರಮೇಯವೂ ಒದಗಿಬರುವುದಿಲ್ಲ ಎಂದು ಒತ್ತಿ ಹೇಳಿದ್ದರು.
ರಾತ್ರಿ 10.50ಕ್ಕೆ ಮುಖ್ಯ ನ್ಯಾಯಮೂರ್ತಿ ರವಿಶಂಕರ್ ಝಾ ಅವರ ಮುಂದೆ ಪ್ರಕರಣವನ್ನು ಪ್ರಸ್ತಾಪಿಸಲಾಯಿತು. ಬಳಿಕ ನ್ಯಾಯಮೂರ್ತಿ ಚಿತ್ಕಾರ ಅವರೆದುರು ಪ್ರಕರಣವನ್ನು ಪಟ್ಟಿ ಮಾಡಲಾಯಿತು.