ನ್ಯಾಯಮೂರ್ತಿಗಳ ವಿರುದ್ಧ ಆಧಾರರಹಿತವಾಗಿ ಮಾತನಾಡುವ ವಕೀಲರ ವಿರುದ್ಧ ಕ್ರಮಕೈಗೊಳ್ಳಿ: ಎಎಬಿಗೆ ನ್ಯಾ. ವೀರಪ್ಪ ನಿರ್ದೇಶನ

ಮಹಾ ಭಾರತದಲ್ಲಿ ಶ್ರೀಕೃಷ್ಣ ಸುದರ್ಶನ ಚಕ್ರ ಬಳಿಸಿದಂತೆ ನಾವು ನ್ಯಾಯಮೂರ್ತಿಗಳು ಸುದರ್ಶನ ಚಕ್ರ ಬಳಸುತ್ತೇವೆ ಎಂದು ಗುಡುಗಿದ ನ್ಯಾಯಮೂರ್ತಿ ಬಿ ವೀರಪ್ಪ.
Justice B Verappa and Karnataka HC
Justice B Verappa and Karnataka HC
Published on

ನ್ಯಾಯಮೂರ್ತಿಗಳ ವಿರುದ್ಧ ಲಘುವಾಗಿ ಮತ್ತು ಆಧಾರರಹಿತವಾಗಿ ಮಾತನಾಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ ಅವರು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರಿಗೆ ಸೂಚಿಸಿದ್ದಾರೆ.

ಬೆಂಗಳೂರು ವಕೀಲರ ಸಂಘವು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿಗೆ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಆ ನ್ಯಾಯಮೂರ್ತಿ ಸರಿಯಿಲ್ಲ, ಈ ನ್ಯಾಯಮೂರ್ತಿ ಸರಿಯಿಲ್ಲ. ಪದೋನ್ನತಿಗೆ ಇಷ್ಟು ಖರ್ಚು ಮಾಡಿದ್ದಾರೆ ಎಂಬ ಮಾತುಗಳನ್ನು ವಕೀಲರು ಏಕೆ ಮಾತನಾಡುತ್ತಾರೆ? ಮತ್ತೊಬ್ಬರ ವೈಯಕ್ತಿಕ ವಿಚಾರದ ಬಗ್ಗೆ ನಾವೇಕೆ ಮಾತನಾಡಬೇಕು? ಸಾಕಷ್ಟು ಭರವಸೆ ಇಟ್ಟುಕೊಂಡು ನ್ಯಾಯಾಲಯಕ್ಕೆ ಬರುವ ದಾವೆದಾರರಿಗೆ ನ್ಯಾಯ ಕೊಡಿಸುವುದು ನಮ್ಮ ಉದ್ದೇಶವಾಗಿರಬೇಕು” ಎಂದರು.

ಗುರುವಾರದ ಕಲಾಪದ ಸಂದರ್ಭದಲ್ಲಿ ವಕೀಲರೊಬ್ಬರು ತೋರಿದ ವರ್ತನೆಗೆ ವಿವೇಕ್‌ ಸುಬ್ಬಾರೆಡ್ಡಿಯವರೂ ಸಾಕ್ಷಿಯಾಗಿದ್ದಾರೆ ಎಂದ ನ್ಯಾಯಮೂರ್ತಿಗಳು, “ನೋವಿನಿಂದ ಹೇಳುತ್ತಿದ್ದೇನೆ. ನನ್ನದು ಯಾವುದಾದರೂ ತಪ್ಪಿದ್ದರೆ ಹೇಳಿ, ಹೈಕೋರ್ಟ್‌ ಮತ್ತು ವಿಧಾನಸೌಧದ ಮಧ್ಯ ನಿಂತು ಎಲ್ಲಾ ವಕೀಲರ ಸಮ್ಮುಖದಲ್ಲಿ ನನ್ನ ತಲೆ ಕಡಿದು ವಕೀಲರ ಕೈಗೆ ಇಡಲು ನಾನು ಸಿದ್ಧ” ಎಂದು ಬೇಸರದಿಂದ ನುಡಿದರು.

“ಪ್ರಮುಖ ಹುದ್ದೆಗಳಲ್ಲಿದ್ದ ವಕೀಲರು ಅನುಚಿತವಾಗಿ ವರ್ತಿಸುತ್ತಾರೆ. ಅಂಥವರನ್ನು ವಕೀಲರ ಸಂಘದಿಂದ ವಜಾ ಮಾಡಬೇಕು. ವಕೀಲರ ಪರಿಷತ್‌ಗೂ ನಾನು ಈ ವಿಚಾರ ತಿಳಿಸಿದ್ದು, ಈಗ ಸಮಯ ಬಂದಿದ್ದು, ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ. ವಕೀಲರಾಗಲಿ, ನ್ಯಾಯಮೂರ್ತಿಗಳಾಲಿ ಒಬ್ಬರನ್ನು ಒಬ್ಬರನ್ನು ನಿಂದಿಸಬಾರದು. ಅಂಥ ವಕೀಲರ ವಿರುದ್ಧ ಕ್ರಮಕೈಗೊಳ್ಳಿ. ಅಂಥವರು ಸಂಸ್ಥೆಯನ್ನು ನಾಶ ಮಾಡುತ್ತಾರೆ” ಎಂದು ಕಿವಿಮಾತು ಹೇಳಿದರು.

Also Read
ಅಧಿಕಾರಿಗಳಿಗೆ, ಸರ್ಕಾರಕ್ಕೆ ನ್ಯಾಯಾಲಯದ ಆದೇಶದ ಮೇಲೆ ಗೌರವವಿಲ್ಲ, ಹಾಗಾದರೆ ನ್ಯಾಯಾಲಯ ಏತಕ್ಕೆ? ನ್ಯಾ. ವೀರಪ್ಪ

“ನಿಮ್ಮೊಂದಿಗೆ (ಎಎಬಿ) ನಾವಿದ್ದೇನೆ. ನಮ್ಮನ್ನು ಕಾಪಾಡಲು ಯಾರೂ ಇಲ್ಲ. ನಾವು ಗಾಜಿನ ಮನೆಯಲ್ಲಿದ್ದೇವೆ. ನೀವು ನಮ್ಮನ್ನು ರಕ್ಷಣೆ ಮಾಡದಿದ್ದರೆ, ನಮಗೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಗೊತ್ತಿದೆ. ಮಹಾ ಭಾರತದಲ್ಲಿ ಶ್ರೀಕೃಷ್ಣ ಸುದರ್ಶನ ಚಕ್ರ ಬಳಿಸಿದಂತೆ ನಾವು ನ್ಯಾಯಮೂರ್ತಿಗಳು ಸುದರ್ಶನ ಚಕ್ರ ಬಳಸುತ್ತೇವೆ. ಒಬ್ಬ ನ್ಯಾಯಮೂರ್ತಿ ಅಥವಾ ಒಬ್ಬ ವಕೀಲರಿಂದ ವ್ಯವಸ್ಥೆ ಹಾಳಾಗಬಾರದು. ಈ ದೇವಸ್ಥಾನದಲ್ಲಿ (ನ್ಯಾಯಾಲಯ) ಯಾರಿಗೂ ಅನ್ಯಾಯವಾಗಲು ಬಿಡಬಾರದು. ಈಗಾಗಲೇ ಆ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿದೆ. ನೀವು ಅವರನ್ನು ಕರೆದು ಸಮಸ್ಯೆ ಪರಿಹರಿಸಿ, ಇಲ್ಲವೇ ನಾವು ಸರಿಪಡಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಆನಂತರ ಮಾತನಾಡಿದ ವಿವೇಕ್‌ ಸುಬ್ಬಾರೆಡ್ಡಿ ಅವರು “ಅತಿರೇಕವಾಗಿ ವರ್ತಿಸುವ ಕೆಲವು ವಕೀಲರು ಇರುತ್ತಾರೆ. ನಿನ್ನೆಯೂ (ಗುರುವಾರ) ನಾನು ನೋಡಿದ್ದೇನೆ. ವಕೀಲರ ದಾಟಿ ಸರಿ ಇರಲಿಲ್ಲ. ಸಂಘದ ಪದಾಧಿಕಾರಿಗಳನ್ನು ಸೇರಿಸಿಕೊಂಡು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ. ಆದರೆ, ವಿಚಾರಣಾಧೀನ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ನಮ್ಮ ಮೇಲೆ ಸುದರ್ಶನ ಚಕ್ರ ಬಿಡುತ್ತಿರುತ್ತಾರೆ. ಅವರಿಗೂ ಒಮ್ಮೆ ನೀವು ಸುದರ್ಶನ ಚಕ್ರ ತೋರಿಸಬೇಕು” ಎಂದು ನ್ಯಾ. ವೀರಪ್ಪ ಅವರ ಗಮನಸೆಳೆದರು.

Kannada Bar & Bench
kannada.barandbench.com