ವಾಹನಗಳ ಮೇಲೆ ಸರ್ಕಾರಿ ಫಲಕಗಳ ದುರ್ಬಳಕೆ ವಿರುದ್ಧ ಕ್ರಮ ಕೈಗೊಳ್ಳಿ: ಕೇರಳ ಹೈಕೋರ್ಟ್

ರಸ್ತೆ ಸುರಕ್ಷತಾ ನೀತಿ, ಮೋಟಾರು ವಾಹನಗಳ ಕಾಯ್ದೆ, 2017ರ ಮೋಟಾರು ವಾಹನಗಳ (ಚಾಲನಾ) ನಿಯಮಗಳ ಜಾರಿಗೆ ಸೂಚಿಸಿದ್ದ ನ್ಯಾಯಾಲಯದ ಈ ಹಿಂದಿನ ಆದೇಶಗಳನ್ನು ಪಾಲಿಸದ ಕಾರಣ ಪ್ರಸ್ತುತ ನಿರ್ದೇಶನ ನೀಡಲಾಗಿದೆ.
ವಾಹನಗಳ ಮೇಲೆ ಸರ್ಕಾರಿ ಫಲಕಗಳ ದುರ್ಬಳಕೆ ವಿರುದ್ಧ ಕ್ರಮ ಕೈಗೊಳ್ಳಿ: ಕೇರಳ ಹೈಕೋರ್ಟ್

ವಾಹನಗಳನ್ನು ಓವರ್‌ಲೋಡ್‌ ಮಾಡುವ ಇಲ್ಲವೇ ಅನುಮತಿ ಇಲ್ಲದೇ ಸರ್ಕಾರಿ ನಾಮಫಲಕಗಳನ್ನು ತಮ್ಮ ವಾಹನಗಳ ಮೇಲೆ ಬಳಸುವ ಮೂಲಕ ರಸ್ತೆ ಸುರಕ್ಷತಾ ನೀತಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಾಹನ ಚಾಲಕರು/ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ರಾಜ್ಯ ಪೊಲೀಸರು ಮತ್ತು ಜಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ [ಅನೂಪ್ ಕೆ ಎ ಮತ್ತು ಕೆ ಆರ್ ಜ್ಯೋತಿಲಾಲ್ ಮತ್ತಿತರರ ನಡುವಣ ಪ್ರಕರಣ].

ಡಾ. ಎಸ್‌ ರಾಜಶೇಖರನ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನಂತೆ ರಸ್ತೆ ಸುರಕ್ಷತಾ ನೀತಿ, ಮೋಟಾರು ವಾಹನಗಳ ಕಾಯ್ದೆ, 2017ರ ಮೋಟಾರು ವಾಹನಗಳ (ಚಾಲನಾ) ನಿಯಮಗಳ ಜಾರಿಗೆ ಸೂಚಿಸಿದ್ದ ನ್ಯಾಯಾಲಯದ ಈ ಹಿಂದಿನ ಆದೇಶಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಅಖಿಲ ಕೇರಳ ಟ್ರಕ್ ಮಾಲೀಕರ ಸಂಘ ಹೂಡಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ನಿರ್ದೇಶನಗಳನ್ನು ನೀಡಿದರು.

Also Read
ಕೇರಳ-ಕರ್ನಾಟಕ ನಡುವಿನ ಸಂಚಾರ ನಿರ್ಬಂಧ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿಗೊಳಿಸಿದ ಕರ್ನಾಟಕ ಹೈಕೋರ್ಟ್‌

ಪೊಲೀಸರು, ಮೋಟಾರು ವಾಹನ ಇಲಾಖೆಯ ಜಾರಿ ಅಧಿಕಾರಿಗಳು ಮುಂತಾದವರನ್ನು ದಿಕ್ಕು ತಪ್ಪಿಸುವ ಸಲುವಾಗಿ, ಸದರಿ ವಾಹನ ಸರ್ಕಾರಿ ಇಲಾಖೆಯ ಒಡೆತನದಲ್ಲಿದೆ ಎಂಬ ಅನಿಸಿಕೆ ಮೂಡಿಸುವ ಉದ್ದೇಶದಿಂದ ಕೇರಳ ಸರ್ಕಾರ", "ಕೇರಳ ರಾಜ್ಯ", "ಸರ್ಕಾರಿ ವಾಹನ" ಇತ್ಯಾದಿ ನಾಮಫಲಕಗಳನ್ನು ಹಾಕಿಕೊಂಡು ಅನೇಕ ಸರಕು ವಾಹನಗಳು ರಾಜ್ಯದಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಇಂತಹ ವಾಹನಗಳಲ್ಲಿ ಬರುವವರು ಸರಕಾರಿ ನೌಕರರಂತೆ ಬಿಂಬಿಸಿಕೊಂಡು ಪೋಲೀಸರು, ಮೋಟಾರು ವಾಹನ ಇಲಾಖೆಯ ಜಾರಿ ಅಧಿಕಾರಿಗಳ ವಾಹನ ತಪಾಸಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾಮಫಲಕಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವುಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸುವುದು, ಜೊತೆಗೆ ವ್ಯಕ್ತಿಗಳ ಗುರುತನ್ನು ಪರಿಶೀಲಿಸುವುದು ಪೊಲೀಸ್ ಮತ್ತು ಮೋಟಾರು ವಾಹನ ಇಲಾಖೆಯ ಜಾರಿ ಅಧಿಕಾರಿಗಳ ಕರ್ತವ್ಯ. ಈ ಕುರಿತು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ ಎಂದು ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಫೆ. 25ಕ್ಕೆ ನಿಗದಿಯಾಗಿದೆ.

Related Stories

No stories found.