
ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಅಧಿಕಾರಿ ಆಗಿರುವ ಪತಿಯನ್ನು ಬೆದರಿಸುವ ಯತ್ನದಲ್ಲಿ ಅವರ ಪತ್ನಿಯ ಛಾಯಚಿತ್ರ ತೆಗೆದಿದ್ದಾರೆ ಎಂದು ದಾಖಲಾಗಿದ್ದ ಹಿಂಬಾಲಿಸುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರಿಗೆ ಹಿಮಾಚಲ ಪ್ರದೇಶ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ [ಕೃಷ್ಣ ಕುಮಾರ್ ಕಸನ ಮತ್ತು ಹಿಮಾಚಲ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆರೋಪಗಳು ನಿಜವಾಗಿದ್ದರೂ, ಆರೋಪಿ ವಿರುದ್ಧ ಹಿಂಬಾಲಿಸುವಿಕೆಯ ಅಪರಾಧ ಸಾಬೀತಾಗಿಲ್ಲ ಎಂದು ನ್ಯಾಯಮೂರ್ತಿ ರಾಕೇಶ್ ಕೈಂತ್ಲಾ ಅವರು ತಿಳಿಸಿದರು.
ಮಹಿಳೆಯನ್ನು ಹಿಂಬಾಲಿಸಿ, ಸಂಪರ್ಕಿಸಿ ಆಕೆಗೆ ಇಷ್ಟವಿಲ್ಲದಿರುವ ಸ್ಪಷ್ಟ ಸೂಚನೆಯ ಹೊರತಾಗಿಯೂ ವೈಯಕ್ತಿಕ ಸಂವಹನ ಬೆಳೆಸುವ ಅಥವಾ ಆಕೆಯ ಅಂತರ್ಜಾಲ, ಇಮೇಲ್ ಇತ್ಯಾದಿ ಬಳಕೆ ಮೇಲೆ ನಿಗಾ ಇಡುವ ವ್ಯಕ್ತಿಗಳನ್ನು ಶಿಕ್ಷಿಸುವುದಕ್ಕೆ ಸಂಬಂಧಿಸಿದೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 78. ಆದರೆ ಈ ಪ್ರಕರಣದಲ್ಲಿ ಅಂತಹ ಆರೋಪ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
"ಪ್ರಸ್ತುತ ಪ್ರಕರಣದಲ್ಲಿ, ದೂರಿನಲ್ಲಿರುವ ಆರೋಪಗಳು ಅರ್ಜಿದಾರರು ಮಾಹಿತಿದಾರರ ಪತ್ನಿಯನ್ನು ಹಿಂಬಾಲಿಸಿ ವೈಯಕ್ತಿಕ ಸಂವಹನ ಬೆಳೆಸಲು ಆಕೆಯನ್ನು ಸಂಪರ್ಕಿಸಿದ್ದರು ಎಂಬುದು ಕಂಡುಬಂದಿಲ್ಲ. ಅರ್ಜಿದಾರರು ಮಾಹಿತಿದಾರರ ಪತ್ನಿಯ ಛಾಯಾಚಿತ್ರಗಳನ್ನು ತೆಗೆದಿದ್ದಾರೆ ಎಂಬುದಷ್ಟೇ ಆರೋಪವಾಗಿದ್ದು, ಮೇಲ್ನೋಟಕ್ಕೆ ಈ ಆರೋಪ ಹಿಂಬಾಲಿಸುವಿಕೆಯ ವ್ಯಾಖ್ಯಾನದಡಿ ಬರುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಪರಿಸರ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಉದ್ಯಮಿ ನಡೆಸುತ್ತಿದ್ದ ವ್ಯವಹಾರದ ವಿರುದ್ಧ ಮಾಲಿನ್ಯ ನಿಯಂತ್ರಣ ಅಧಿಕಾರಿ ಕೆಲವು ಕ್ರಮ ಕೈಗೊಂಡಿದ್ದರು. ಅಕ್ಟೋಬರ್ 2024ರಲ್ಲಿ ಅಧಿಕಾರಿ ಚಲಾಯಿಸುತ್ತಿದ್ದ ವಾಹನವನ್ನು ಹಿಂಬಾಲಿಸಿ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ ಆರೋಪ ಪ್ರಸ್ತುತ ಅರ್ಜಿ ಸಲ್ಲಿಸಿರುವ ಉದ್ಯಮಿ ಮೇಲಿತ್ತು.
ಉದ್ಯಮಿ ತಮ್ಮನ್ನು ಬೆದರಿಸಲು ಮತ್ತು ಅನಗತ್ಯ ಸವಲತ್ತು ಪಡೆಯಲು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾರೆ. ಆತ ತಮ್ಮನ್ನು ಬೆದರಿಸುವ ತಂತ್ರದ ಭಾಗವಾಗಿ ತಮ್ಮ ಪತ್ನಿಯ ಫೋಟೊ ಮತ್ತು ವೀಡಿಯೊ ತೆಗೆದಿದ್ದಾರೆ ಎಂದು ಅಧಿಕಾರಿ ದೂರಿದ್ದರು.
ಭಾರತೀಯ ನ್ಯಾಯ ಸಂಹಿತೆ- 2023ರ (ಬಿಎನ್‌ಎಸ್) ಸೆಕ್ಷನ್ 221 (ಸರ್ಕಾರಿ ಅಧಿಕಾರಿಗೆ ಅಡ್ಡಿ), 224 (ಸರ್ಕಾರಿ ಅಧಿಕಾರಿಯನ್ನು ಗಾಯಗೊಳಿಸುವುದು), 351(2) (ಕ್ರಿಮಿನಲ್ ಬೆದರಿಕೆ) ಮತ್ತು 78 (ಹಿಂಬಾಲಿಸುವಿಕೆ) ಅಡಿಯಲ್ಲಿ ಉದ್ಯಮಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಆರೋಪಗಳಲ್ಲಿ ಹೆಚ್ಚಿನವು ಜಾಮೀನು ನೀಡಬಹುದಾದವುಗಳಾಗಿವೆ. ಬಿಎನ್‌ಎಸ್ ಸೆಕ್ಷನ್ 78 (ಹಿಂಬಾಲಿಸುವಿಕೆ) ಮಾತ್ರ ಜಾಮೀನು ರಹಿತ ಅಪರಾಧವಾಗಿದೆ ಎಂದು ತಿಳಿಸಿ ಉದ್ಯಮಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಬದಲಿಗೆ ಅಧಿಕಾರಿಯೇಲಂಚ ಕೇಳುತ್ತಿದ್ದಾರೆ ಎಂದಿದ್ದರು.
ಆದರೆ ಅಧಿಕಾರಿಯ ಪತ್ನಿಯನ್ನು ಉದ್ಯಮಿ ಹಿಂಬಾಲಿಸುತ್ತಿರುವುದಕ್ಕೆ ದಾಖಲೆಗಳಿವೆ. ಆತನಿಗೆ ನಿರೀಕ್ಷಣಾ ಜಾಮೀನು ನೀಡಿದರೆ ತೊಂದರೆಯಾಗುತ್ತದೆ ಎಂದು ಸರ್ಕಾರ ವಾದಿಸಿತ್ತು. ಅಧಿಕಾರಿಯ ಪರ ವಕೀಲರು ಕೂಡ ನಿರೀಕ್ಷಣಾ ಜಾಮೀನು ನೀಡದಂತೆ ಕೋರಿದ್ದರು.
ವಾದ ಆಲಿಸಿದ ನ್ಯಾಯಾಲಯ ಅರ್ಜಿದಾರರ ವಿರುದ್ಧ ಹಿಂಬಾಲಿಸುವಿಕೆಯ ಅಪರಾಧ ಸಾಬೀತಾಗಿಲ್ಲ. ಪ್ರಕರಣದಲ್ಲಿ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ತಿಳಿಸಿ ಉದ್ಯಮಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.
[ತೀರ್ಪಿನ ಪ್ರತಿ]