

ತಮಿಳುನಾಡು ಪದವಿ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶ ಮಸೂದೆ- 2021ಕ್ಕೆ ಅಂಕಿತ ಹಾಕದ ರಾಷ್ಟ್ರಪತಿಗಳ ನಿರ್ಧಾರ ಪ್ರಶ್ನಿಸಿ ತಮಿಳುನಾಡು ಸರ್ಕಾರ ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮೂಲಕ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುವುದಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕೃತವಾದ ಈ ಮಸೂದೆ ವಿನಾಯಿತಿ ನೀಡುತ್ತದೆ.
ಹಿರಿಯ ವಕೀಲ ಪಿ ವಿಲ್ಸನ್ ಅವರು ವಕೀಲೆ ಮಿಶಾ ರೋಹಟಗಿ ಅವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ಪ್ರಮುಖಾಂಶಗಳು
ಮಸೂದೆಗೆ ಒಪ್ಪಿಗೆ ದೊರೆಯದೆ ಇರುವುದರಿಂದ ನ್ಯಾಯಾಲಯವೇ ಸಂವಿಧಾನದ 254 (2)ನೇ ವಿಧಿ ಬಳಸಿ ತೀರ್ಪಿನ ಮೂಲಕ ರಾಷ್ಟ್ರಪತಿಗಳ ಸಮ್ಮತಿ ಪಡೆದಿರುವುದಾಗಿ ಭಾವಿಸಲಾಗಿದೆ ಎಂದು ನ್ಯಾಯಾಲಯ ಘೋಷಿಸಬೇಕು.
ರಾಷ್ಟ್ರಪತಿಗಳು ಅಂಕಿತ ಹಾಕದೆ ಇರುವುದು ಸಂವಿಧಾನ ಬಾಹಿರ ಎಂದು ಅದು ತೀರ್ಪು ನೀಡಬೇಕು.
ಯಾವುದೇ ಕಾರಣಗಳನ್ನು ನೀಡದೆ ಮಸೂದೆಗೆ ಯಾಂತ್ರಿಕವಾಗಿ ತಡೆ ನೀಡಲಾಗಿದೆ.
ಕೇಂದ್ರ ಸರ್ಕಾರ ಎತ್ತಿದ್ದ ಪ್ರತಿಯೊಂದು ಆಕ್ಷೇಪಣೆಗೂ ರಾಜ್ಯ ಸರ್ಕಾರ ವಿವರವಾದ ಉತ್ತರಗಳನ್ನು ನೀಡಿದ್ದರೂ ರಾಷ್ಟ್ರಪತಿಗಳ ಅಂಕಿತ ದೊರೆತಿಲ್ಲ.
ರಾಷ್ಟ್ರಪತಿಗಳ ಕ್ರಮವು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.
ಇದರಿಂದಾಗಿ ಶಾಸಕಾಂಗ ಸ್ವಾಯತ್ತತೆ, ಸಂವಿಧಾನದ 201 ನೇ ವಿಧಿ ಮತ್ತು 254 (2) ನೇ ವಿಧಿಯ ವ್ಯಾಪ್ತಿಗೆ ಸಂಬಂಧಿಸಿದ ಗಣನೀಯ ಪ್ರಶ್ನೆಗಳು ಹುಟ್ಟಿವೆ.
ನೀಟ್ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ.
ಇದನ್ನುತಡೆಯುವುದಕ್ಕಾಗಿ ಅಂಕಗಳ ವೈಜ್ಞಾನಿಕ ಸಾಮಾನ್ಯೀಕರಣ ವಿಧಾನವನ್ನು ಮಸೂದೆ ಮೂಲಕ ಜಾರಿಗೆ ತರಲಾಗಿದೆ.