
ವಿವಿಧ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೂಪಿಸಿದ್ದ ಒಂಬತ್ತು ಕಾಯಿದೆಗಳ ಜಾರಿ ತಡೆಹಿಡಿದ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ [ತಮಿಳುನಾಡು ಸರ್ಕಾರ ಮತ್ತಿತರರು ಹಾಗೂ ಕೆ ವೆಂಕಟಾಚಲಪತಿ @ ಕುಟ್ಟಿ ಇನ್ನಿತರರ ನಡುವಣ ಪ್ರಕರಣ] .
ರಾಜ್ಯಪಾಲರ ಸಮ್ಮತಿ ಪಡೆದಿದೆ ಎಂದು ಭಾವಿಸಿ ಕಾಯಿದೆಗಳನ್ನು ಜಾರಿಗೆ ತರುವಂತೆ ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಪ್ರಕರಣವನ್ನು ಬೇರೆ ಹೈಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಕೋರಿ ಸರ್ಕಾರ ಈ ಹಿಂದೆ ಸಲ್ಲಿಸಿದ್ದ ಅರ್ಜಿಯೊಂದಿಗೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಪ್ರಸ್ತುತ ಮನವಿಯನ್ನು ಸೇರ್ಪಡೆ ಮಾಡಿತು.
ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಅದು ನಿರಾಕರಿಸಿತಾದರೂ ತಾನು ನೀಡಿರುವ ನೋಟಿಸ್‌ಗೆ ಪ್ರತಿಕ್ರಿಯೆಗಳು ಸಲ್ಲಿಕೆಯಾದ ನಂತರ ಪ್ರಕರಣ ಪರಿಶೀಲಿಸಲು ಒಪ್ಪಿಕೊಂಡಿತು. ಮಧ್ಯಂತರ ಪರಿಹಾರ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.
ಬೇಸಿಗೆ ರಜೆಯ ನಂತರ ವರ್ಗಾವಣೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಸುಳಿವು ನೀಡಿದ್ದು ಕಕ್ಷಿದಾರರು ತ್ವರಿತ ವಿಚಾರಣೆ ಬಯಸಿದರೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ಸಂಪರ್ಕಿಸಲು ಮುಕ್ತರು ಎಂದು ಅದು ತಿಳಿಸಿತು.
ಬಿಜೆಪಿ ನಾಯಕ ಕೆ ವೆಂಕಟಾಚಲಪತಿ ಸಲ್ಲಿಸಿದ ರಿಟ್ ಅರ್ಜಿಯ ಹಿನ್ನೆಲೆಯಲ್ಲಿ ಮೇ 21ರಂದು ಹೈಕೋರ್ಟ್ ಈ ಆದೇಶ ನೀಡಿತ್ತು.
ಇಂದು ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ , ಸುಪ್ರೀಂ ಕೋರ್ಟ್ ಏಪ್ರಿಲ್ 8 ರಂದು ನೀಡಿದ ತೀರ್ಪನ್ನು ಮೀರಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ವಾದಿಸಿದರು.
ಸರ್ಕಾರದ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಯುಜಿಸಿ ನಿಯಮಾವಳಿ 2018ಕ್ಕೆ ಸರಿಹೊಂದದೆ ಇರುವುದರಿಂದ ರಾಜ್ಯದ ಕಾಯಿದೆಗಳು ಅಮಾನ್ಯವಾಗಿವೆ ಎಂದರು.