ಅಮೆಜಾನ್ ವೆಬ್‌ಸರಣಿ ತಾಂಡವ್ ವಿರುದ್ಧ ದೇಶದ ವಿವಿಧೆಡೆ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ಒಂದೆಡೆ ಅಡಕಗೊಳಿಸುವಂತೆ ಕೋರಿ ಸರಣಿಯ ನಿರ್ದೇಶಕರು ಮತ್ತು ನಿರ್ಮಾಪಕರು ಸಲ್ಲಿಸಿದ್ದ ಮನವಿ ಆಧರಿಸಿ ಸುಪ್ರೀಂ ಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.
ತಮ್ಮ ವಿರುದ್ಧ ಒತ್ತಾಯಪೂರ್ವಕ ಕ್ರಮ ಕೈಗೊಳ್ಳದಂತೆ ರಕ್ಷಣೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಇದಕ್ಕೆ ಬದಲಾಗಿ ನಿರೀಕ್ಷಣಾ ಜಾಮೀನು ಕೋರಿ ದೇಶಾದ್ಯಂತ ಇರುವ ಎಲ್ಲಾ ಹೈಕೋರ್ಟ್‌ಗಳಿಗೂ ಮನವಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ನೇತೃತ್ವದ ತ್ರಿಸದಸ್ಯ ಪೀಠವು ಸೂಚಿಸಿದೆ.
ಆಕ್ಷೇಪಾರ್ಹ ಅಂಶಗಳ ಕುರಿತಾಗಿ ಕ್ಷಮೆ ಕೋರಲಾಗಿದೆ ಎಂದು ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಫಾಲಿ ನಾರಿಮನ್ ಹೇಳಿದರು. “ನಿಮ್ಮ ವಿರುದ್ಧವಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದಿದ್ದೀರಿ. ಹಾಗಿದ್ದರೆ ನೀವೇಕೆ ಹೈಕೋರ್ಟ್‌ಗಳನ್ನು ಸಂಪರ್ಕಿಸಬಾರದು? ಎಂದು ನ್ಯಾ. ಭೂಷಣ್ ಪ್ರಶ್ನಿಸಿದರು.
ಆರು ವಿಭಿನ್ನ ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಾರಿಮನ್ ಪೀಠದ ಗಮನಸೆಳೆದರು. ಕ್ಷಮೆ ಕೋರಿ, ಆಕ್ಷೇಪಾರ್ಹ ಅಂಶಗಳನ್ನು ತೆಗೆದಿದ್ದರೆ ಪೊಲೀಸರು ಮುಕ್ತಾಯ ವರದಿ ಸಲ್ಲಿಸುತ್ತಾರೆ ಎಂದು ನ್ಯಾ. ಶಾ ಹೇಳಿದರು.
“ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಸಂವಿಧಾನದ 19(1)(ಎ) ವಿಧಿ ಉಲ್ಲಂಘಿಸಿದರೆ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದು ಎಂದು ಹೇಳಲಾಗಿದೆ. ಕಕ್ಷಿದಾರರು ಮುಂಬೈನಲ್ಲಿದ್ದು, ಆರು ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಮರ್ಥಿಸಿಕೊಳ್ಳುವುದು ಹೇಗೆ?” ಎಂದು ಇನ್ನೊಬ್ಬ ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಮುಕುಲ್ ರೋಹಟ್ಗಿ ಪ್ರಶ್ನಿಸಿದರು.
ತಾಂಡವ್‌ನ ನಿರ್ದೇಶಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ನ್ಯಾ. ಶಾ ಅವರು, “ನಿಮಗೆ ನೀಡಲಾಗಿರುವ ವಾಕ್ ಸ್ವಾತಂತ್ರ್ಯದ ಹಕ್ಕು ಪರಿಪೂರ್ಣವಲ್ಲ. ಅದು ನಿರ್ಬಂಧಕ್ಕೆ ಒಳಪಟ್ಟಿದೆ” ಎಂದರು.
ಎಲ್ಲಾ ಎಫ್‌ಐಆರ್‌ಗಳನ್ನು ಒಂದರಲ್ಲೇ ಅಡಕಗೊಳಿಸಿ ಮುಂಬೈಗೆ ವರ್ಗಾಯಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದೆ. ದೂರುಗಳ ಆಧಾರದಲ್ಲಿ ಯಾವುದೇ ಕ್ರಮಕೈಗೊಳ್ಳದಂತೆ ಹಾಗೂ ಇದೇ ವಿಷಯವಾಗಿ ಮತ್ತೆ ದೂರುಗಳನ್ನು ದಾಖಲಿಸಿದಂತೆಯೂ ಅರ್ಜಿಯಲ್ಲಿ ಕೋರಲಾಗಿತ್ತು.
ತಾಂಡವ್ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಮತ್ತು ನಿರ್ಮಾಪಕರಾದ ಹಿಮಾಂಶು ಮೆಹ್ರಾ ಮತ್ತು ಗೌರವ್ ಸೋಲಂಕಿ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.