[ತಾಂಡವ್ ವಿವಾದ] ಒಟಿಟಿ ವೇದಿಕೆಗಳು ಅಶ್ಲೀಲ ಚಿತ್ರಗಳನ್ನೂ ಪ್ರದರ್ಶಿಸುತ್ತಿವೆ, ಪರಿಶೀಲನೆ ಅಗತ್ಯ: ಸುಪ್ರೀಂ ಕೋರ್ಟ್

ಸಾಲಿಸಿಟರ್ ಜನರಲ್ ಮೆಹ್ತಾ ಅವರಿಗೆ 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಕುರಿತು ಮಾಹಿತಿ ಒದಗಿಸುವಂತೆ ಸೂಚಿಸಿದ ಪೀಠ ಪ್ರಕರಣವನ್ನು ನಾಳೆಗೆ (ಶುಕ್ರವಾರ) ಮುಂದೂಡಿತು.
TANDAV amazon prime, Supreme Court
TANDAV amazon prime, Supreme Court

ಅಮೆಜಾನ್‌ ಪ್ರೈಮ್‌ ಮತ್ತು ನೆಟ್‌ಫ್ಲಿಕ್ಸ್‌ನಂತಹ ಓವರ್‌ ದ ಟಾಪ್‌ (ಒಟಿಟಿ) ವೇದಿಕೆಗಳಲ್ಲಿ ಕೆಲವು ಬಾರಿ ಅಶ್ಲೀಲ ಚಿತ್ರಗಳು ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಪರಿಶೀಲನೆ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ. ತಾಂಡವ್‌ ವೆಬ್‌ ಸರಣಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಅಮೆಜಾನ್‌ ಪ್ರೈಮ್‌ ವೀಡಿಯೊ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾ. ಅಶೋಕ್‌ ಭೂಷಣ್‌ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಪರ್ಣಾ ವಿರುದ್ಧದ ಪ್ರಕರಣ ಆಘಾತಕಾರಿ ಎಂದು ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಬಣ್ಣಿಸಿದಾಗ ಪೀಠ ಒಟಿಟಿ ಕುರಿತಂತೆ ಜಾರಿಗೆ ಬಂದಿರುವ ನಿಯಮಗಳ ವಿವರ ಒದಗಿಸುವಂತೆ ಸೂಚಿಸಿತು. ನ್ಯಾಯಮೂರ್ತಿಗಳ ಅಭಿಪ್ರಾಯಕ್ಕೆ ಪೂರಕ ಪ್ರತಿಕ್ರಿಯೆ ನೀಡಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ‘ಅವು (ಒಟಿಟಿಗಳು) ನಿಂದನಾತ್ಮಕ ವಿಚಾರಗಳ ಜೊತೆಗೆ ಕೆಟ್ಟ ಸಂಗತಿಗಳನ್ನೂ ತೋರಿಸುತ್ತಿವೆ” ಎಂದರು.

Also Read
ತಾಂಡವ್ ವಿವಾದ: ಪ್ರಚೋದನಾಕಾರಿ ಸಾರ್ವಜನಿಕ ಅಭಿಪ್ರಾಯ, ದೇವರನ್ನು ಆಕ್ಷೇಪಾರ್ಹವಾಗಿ ಬಿಂಬಿಸಿದ್ದಕ್ಕೆ ಎಫ್‌ಐಆರ್ ದಾಖಲು

ಆಗ “ಒಟಿಟಿ ನಿಯಮಗಳನ್ನು ಆಧರಿಸಿ ಅಲಹಾಬಾದ್‌ ಹೈಕೋರ್ಟ್‌ ಪುರೋಹಿತ್‌ ಜಾಮೀನು ಅರ್ಜಿಯನ್ನು ತಿರಸ್ಕರಿಸಿಲ್ಲ. ಇದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರ” ಎಂದು ರೋಹಟ್ಗಿ ಮನವರಿಕೆ ಮಾಡಿಕೊಡಲು ಮುಂದಾದರು. ರೋಹಟ್ಗಿ ಅವರ ಪ್ರತಿರೋಧದ ನಡುವೆಯೂ 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಕುರಿತು ಮಾಹಿತಿ ಒದಗಿಸುವಂತೆ ಮೆಹ್ತಾ ಅವರಿಗೆ ಸೂಚಿಸಿದ ಪೀಠ ಪ್ರಕರಣವನ್ನು ನಾಳೆಗೆ (ಶುಕ್ರವಾರ) ಮುಂದೂಡಿತು.

ದೇವರನ್ನು ಅವಹೇಳನಕಾರಿಯಾಗಿ ಬಿಂಬಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಅಲಾಹಾಬಾದ್‌ ಹೈಕೋರ್ಟ್‌ ಅಪರ್ಣಾ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು.

Kannada Bar & Bench
kannada.barandbench.com