ಟಾಟಾ ಮತ್ತು ಮಿಸ್ತ್ರಿ ನಡುವಣ ಪ್ರಕರಣ: ಸಂಭಾವ್ಯ ಹಿತಾಸಕ್ತಿ ಸಂಘರ್ಷ ಕುರಿತು ಪ್ರಸ್ತಾಪಿಸಿದ ಸಿಜೆಐ ಬೊಬ್ಡೆ

ಪ್ರಕರಣವೊಂದರಲ್ಲಿ ತಮ್ಮ ಮಗ ಶ್ರೀನಿವಾಸ್‌ ಬೊಬ್ಡೆ ಅವರು ಶಾಪೂರ್‌ಜಿ ಪಾಲೊನ್‌ಜಿ ಸಂಸ್ಥೆ ಪರವಾಗಿ ವಾದಿಸಿರುವುದರಿಂದ ಪ್ರಸ್ತುತ ಪ್ರಕರಣ ಇತ್ಯರ್ಥಪಡಿಸಲು ಏನಾದರೂ ಆಕ್ಷೇಪಣೆಗಳಿವೆಯೇ ಎಂದು ಸಿಜೆಐ ಎಸ್‌ ಎ ಬೊಬ್ಡೆ ಪ್ರಶ್ನಿಸಿದರು.
CJI SA Bobde
CJI SA Bobde

“ನಾನೊಂದು ಘೋಷಣೆ ಮಾಡಬೇಕಿದೆ...”

ಟಾಟಾ ಸಮೂಹ ಸಂಸ್ಥೆ ಮತ್ತು ಶಾಪೂರ್‌ಜಿ ಪಾಲೊನ್‌ಜಿ ಸಮೂಹದ ನಡುವಣ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೀಗೆ ಹೇಳಿದಾಗ ಅವರು ಯಾವ ವಿಚಾರದ ಕುರಿತು ಮಾತನಾಡುತ್ತಾರೆ ಎಂಬ ಕುತೂಹಲ ಗರಿಗೆದರಿತು. ಆದರೆ ಅದು ಪ್ರಕರಣಕ್ಕೆ ಸಂಬಂಧಿಸಿದ ಪ್ರಕಟಣೆ ಎನ್ನುವುದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಅವರು ಪ್ರಸ್ತಾಪಿಸಲು ಹೊರಟದ್ದು ಪ್ರಕರಣದೊಂದಿಗಿನ ತಮ್ಮ ಸಂಭಾವ್ಯ ಹಿತಾಸಕ್ತಿ ಸಂಘರ್ಷದ ಕುರಿತು.

"ನನ್ನ ಮಗ ಕಳೆದ ಎರಡು ವರ್ಷಗಳಿಂದ ಮುಂಬೈನ ಕೊಳೆಗೇರಿ ಪುನರ್ವಸತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಪೂರ್‌ಜಿ ಪಾಲೊನ್‌ಜಿ ಸಮೂಹಕ್ಕೆ ಸೇರಿದ ಕಂಪನಿಯೊಂದರ ಪರವಾಗಿ ವಾದ ಮಂಡಿಸುತ್ತಿದ್ದಾನೆ ಎಂದು ಕಳೆದ ವಾರಾಂತ್ಯದಲ್ಲಿ ತಿಳಿಯಿತು. ಹಾಗಾಗಿ ಪ್ರಕರಣವನ್ನು ನಾನು ಆಲಿಸುವ ಬಗ್ಗೆ ನಿಮ್ಮಲ್ಲಿ ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಎಂದು ಇದನ್ನು ಬಹಿರಂಗಪಡಿಸಲು ಯೋಚಿಸಿದೆ” ಎಂದು ನ್ಯಾ. ಬೊಬ್ಡೆ ಹೇಳಿದರು.

Also Read
“ನನ್ನ ತಂದೆ ಮತ್ತು ನಾನಿ ಪಾಲ್ಖಿವಾಲಾ ಅವರಿಗೂ ಮಹಾರಾಷ್ಟ್ರ ವಿಧಾನಸಭೆ ನೋಟಿಸ್ ನೀಡಿತ್ತು”: ಸಿಜೆಐ ಬೊಬ್ಡೆ

ಪ್ರಕರಣದಲ್ಲಿ ಟಾಟಾ ಸಮೂಹ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಹಿರಿಯ ನ್ಯಾಯವಾದಿಗಳಾದ ಹರೀಶ್‌ ಸಾಳ್ವೆ ಮತ್ತು ಡಾ. ಎ ಎಂ ಸಿಂಘ್ವಿ ಅವರನ್ನು ನಿರ್ದಿಷ್ಟವಾಗಿ ಉದ್ದೇಶಿಸಿ ಈ ಹೇಳಿಕೆ ನೀಡಲಾಗಿತ್ತು. ಆದರೆ, ಟಾಟಾ ಅಥವಾ ಶಾಪೂರ್‌ಜಿ ಪಾಲೊನ್‌ಜಿ ಸಮೂಹ ಸಂಸ್ಥೆಯ ಪರವಾಗಿ ವಾದ ಮಂಡಿಸುತ್ತಿರುವ ವಕೀಲರಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ.

ನ್ಯಾ. ಬೊಬ್ಡೆ ಅವರು “ಇಂತಹ ವಿಚಾರಗಳನ್ನು ಮೊದಲೇ ಹೇಳಿಬಿಡುವುದು ಒಳಿತು. ಇಲ್ಲದಿದ್ದರೆ ಇವು ಭವಿಷ್ಯದಲ್ಲಿ ಸಂಭಾವ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತವೆ” ಎಂದರು. ನಂತರ ನ್ಯಾಯಾಲಯ ಈ ಅಂಶಗಳನ್ನು ದಾಖಲಿಸಲು ಮುಂದಾಯಿತು.

"ಇಂದು ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಾಗ, ಸುಮಾರು ಎರಡು ವರ್ಷಗಳ ಕಾಲ ಕೊಳೆಗೇರಿ ಪುನರ್ವಸತಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಕೀಲರಾದ ಶ್ರೀನಿವಾಸ್ ಬೊಬ್ಡೆ ಅವರು ಮುಂಬೈನ ಶಾಪೂರ್‌ಜಿ ಪಾಲೊನ್‌ಜಿ ಸಮೂಹದ ಅಂಗಸಂಸ್ಥೆಯೊಂದರ ಪರವಾಗಿ ಹಾಜರಾಗಿದ್ದಾರೆ ಎಂದು ನ್ಯಾಯಾಲಯ ನ್ಯಾಯವಾದಿ ವರ್ಗಕ್ಕೆ ತಿಳಿಸುತ್ತದೆ. ಪ್ರಸ್ತುತ ಪ್ರಕರಣ ಇತ್ಯರ್ಥಪಡಿಸುವಲ್ಲಿ ಯಾವುದೇ ಆಕ್ಷೇಪ ಇಲ್ಲ ಎಂದು ಕಕ್ಷೀದಾರರ ಪರ ಹಾಜರಾದ ಹಿರಿಯ ನ್ಯಾಯವಾದಿಗಳು/ ವಕೀಲರಾದ ಹರೀಶ್‌ ಎನ್‌ ಸಾಳ್ವೆ, ಡಾ. ಎ ಎಂ ಸಿಂಘ್ವಿ, ಸಿ ಎ ಸುಂದರಂ, ಮೋಹನ್‌ ಪರಾಸರನ್‌, ಶ್ಯಾಂ ದಿವಾನ್‌, ಶ್ರೀಮತಿ ಫೆರೆಶ್ತೆ ಡಿ ಸೆಥ್ನಾ ಮತ್ತಿತರರು ಹೇಳಿದ್ದಾರೆ. ಕಕ್ಷೀದಾರರ ಪರವಾಗಿ ಹಾಜರಾದ ವಕೀಲರ ಜಂಟಿ ಹೇಳಿಕೆಯನ್ನು ದಾಖಲೆಗಳಲ್ಲಿ ಪಡೆಯಲಾಗಿದೆ” ಎಂದು ಸೋಮವಾರದ ಆದೇಶದಲ್ಲಿ ತಿಳಿಸಲಾಗಿದೆ. ಪ್ರಕರಣ ಮಂಗಳವಾರ ಮುಂದುವರೆಯಲಿದೆ.

Related Stories

No stories found.
Kannada Bar & Bench
kannada.barandbench.com