ಸುಳ್ಳು ಸಾಕ್ಷ್ಯ ಮತ್ತು ಫೋರ್ಜರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರನ್ನು ಜುಲೈ 2 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಗುಜರಾತ್ ನ್ಯಾಯಾಲಯ ಭಾನುವಾರ ಆದೇಶಿಸಿದೆ.
ಗುಜರಾತ್ 2002ರ ಕೋಮುಗಲಭೆ ನಿಭಾಯಿಸಿದ ರೀತಿ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮರುದಿನ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶನಿವಾರ ತೀಸ್ತಾ ಅವರನ್ನು ವಶಕ್ಕೆ ಪಡೆದಿತ್ತು.
ಪ್ರಧಾನಿ ಮೋದಿ ಅವರಿಗೆ ಕ್ಲೀನ್‌ಚಿಟ್ ನೀಡಿದ ತೀರ್ಪಿನಲ್ಲಿ ತೀಸ್ತಾ ಗುಜರಾತ್ ಮಾಜಿ ಪೊಲೀಸ್ ಅಧಿಕಾರಿಗಳಾದ ಆರ್ ಬಿ ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಮತ್ತು ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ತೀಸ್ತಾ ಅವರಲ್ಲದೆ ಗುಜರಾತ್ ಮಾಜಿ ಡಿಜಿಪಿ ಆರ್ ಬಿ ಶ್ರೀಕುಮಾರ್ ಅವರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದ್ದು ಸಂಜೀವ್ ಭಟ್ ಈಗಾಗಲೇ ಜೈಲಿನಲ್ಲಿದ್ದಾರೆ.
ಕೆಲವು ತನಿಖಾಧಿಕಾರಿಗಳು ಮತ್ತು ಅಪರಿಚಿತರೊಂದಿಗೆ ಸೇರಿ ನಕಲಿ ದಾಖಲೆ ಮತ್ತು ಪುರಾವೆಗಳನ್ನು ಸೃಷ್ಟಿಸುವ ಮೂಲಕ ಭಾರತೀಯ ದಂಡ ಸಂಹಿತೆಯಡಿ ಅಪರಾಧ ಎಸಗಿದ್ದಾರೆ ಎಂದು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತೀಸ್ತಾ ಅವರನ್ನು ಬಂಧಿಸಲಾಗಿತ್ತು.