ಆರೋಗ್ಯ ಸೇತು ರೂಪಿಸಿದವರ ಬಗ್ಗೆ ಮಾಹಿತಿ ಇಲ್ಲ ಎಂದ ಎನ್ಐಸಿ: ಸ್ವಯಂಪ್ರೇರಿತ ಕ್ರಮಕ್ಕೆ ಸಿಜೆಐ ಕೋರಿದ ಪೂನಾವಾಲಾ

ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ದತ್ತಾಂಶ ಸಂಗ್ರಹಿಸಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಲು ಸೂಚಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ತೆಹ್ಸೀನ್ ಪೂನಾವಾಲಾ ಮನವಿ ಮಾಡಿದ್ದಾರೆ.
Aarogya Setu app
Aarogya Setu app

ಆರೋಗ್ಯ ಸೇತು ಅಪ್ಲಿಕೇಶನ್‌ ಅನ್ನು ಯಾರು ಸೃಷ್ಟಿಸಿದರು ಮತ್ತು ಹೇಗೆ ಎಂಬುದರ ಮಾಹಿತಿ ತನ್ನ ಬಳಿ ಇಲ್ಲ ಎಂದಿರುವ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ವಿವರಣೆಯನ್ನು ನ್ಯಾಯಾಲಯವು ಸ್ವಯಂ ಪರಿಗಣನೆಗೆ ತೆಗೆದುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್‌ ಎ ಬೊಬ್ಡೆ ಅವರಿಗೆ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಪತ್ರ ಬರೆದಿದ್ದಾರೆ.

ಆರೋಗ್ಯ ಸೇತು ಮೂಲಕ ಸಂಗ್ರಹಿಸಲಾದ ದತ್ತಾಂಶದ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ಅಫಿಡವಿಟ್‌ ಸಲ್ಲಿಸಲು ನಿರ್ದೇಶಿಸಿಸುವಂತೆ ಸಿಜೆಐ ಕೋರಿರುವ ಪೂನಾವಾಲಾ, ಆರೋಗ್ಯ ಸೇತು ಮೂಲಕ ಸಂಗ್ರಹಿಸಿದ ದತ್ತಾಂಶವನ್ನು ಅಳಿಸುವಂತೆ ಕೋರಿದ್ದಾರೆ.

ರಕ್ಷಣಾ ಸೇವೆಗಳು, ಸರ್ಕಾರಿ ಅಧಿಕಾರಿಗಳು, ನ್ಯಾಯಮೂರ್ತಿಗಳು ಇತ್ಯಾದಿ ಸೇರಿದಂತೆ ಸುಮಾರು 16.23 ಕೋಟಿ ಜನರಿಂದ ದತ್ತಾಂಶ ಸಂಗ್ರಹಿಸಲಾಗಿದ್ದು, ಆರೋಗ್ಯ ಸೇತು ಅತ್ಯಾಧುನಿಕ ಕಣ್ಗಾವಲಿನ ಸಾಧನದ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಸಿಜೆಐಗೆ ಬರೆದ ಪತ್ರದಲ್ಲಿ ಪೂನಾವಾಲಾ ಉಲ್ಲೇಖಿಸಿದ್ದಾರೆ. ಕೋವಿಡ್‌ ಸೋಂಕಿತರನ್ನು ಪತ್ತೆಹಚ್ಚುವ ಕೆಲಸದಲ್ಲಿ ಆರೋಗ್ಯ ಸೇತು ಸಂಪೂರ್ಣ ವಿಫಲವಾಗಿದೆ. “ಆರೋಗ್ಯ ಸೇತುವನ್ನು ಕಡ್ಡಾಯಗೊಳಿಸಿದ್ದರಿಂದ ಯಾವುದೇ ಉದ್ದೇಶ ಈಡೇರಿಲ್ಲ. ಬದಲಿಗೆ ಯಾವುದೇ ತೆರನಾದ ದತ್ತಾಂಶ ರಕ್ಷಣಾ ಕಾನೂನಿಗೆ ಒಳಪಡದೇ ಆರೋಗ್ಯ ಸೇತುವಿನ ಮೂಲಕ ಅಪಾರ ಪ್ರಮಾಣದ ವೈಯಕ್ತಿಕ ಮಾಹಿತಿಯನ್ನೊಳಗೊಂಡ ದತ್ತಾಂಶ ಸಂಗ್ರಹಿಸಲಾಗಿದೆ” ಎಂದಿದ್ದಾರೆ.

Also Read
ಆರೋಗ್ಯ ಸೇತು ಡೌನ್‌ಲೋಡ್ ಮಾಡಿಕೊಂಡಿರುವವರ ದತ್ತಾಂಶ ಬಳಕೆ ಮಾಡಿಕೊಳ್ಳುತ್ತಿರುವಿರೇ? ಕೇಂದ್ರಕ್ಕೆ ಹೈಕೋರ್ಟ್ ಪ್ರಶ್ನೆ

ಮಾಹಿತಿ ಹಕ್ಕು ಕಾಯಿದೆ ಅಡಿ ಮಾಹಿತಿ ನೀಡಲು ಸಂಬಂಧಪಟ್ಟವರು ನಿರಾಕರಿಸುವುದನ್ನು ಒಪ್ಪಲಾಗದು ಎಂದಿರುವ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ತಮಗೆ ಮಾಹಿತಿ ಇಲ್ಲ ಎಂದಾದರೆ ಗೌ.ಇನ್‌ (gov.in) ಡೊಮೈನ್‌‌ ಹೆಸರಿನಲ್ಲಿ ಆರೋಗ್ಯ ಸೇತು ವೆಬ್‌ಸೈಟ್‌ ರೂಪಿಸಿದ್ದು ಹೇಗೆ ಎಂಬುದನ್ನು ಲಿಖಿತವಾಗಿ ವಿವರಿಸುವಂತೆ ಎನ್‌ಐಸಿಗೆ ನಿರ್ದೇಶಿಸಿತ್ತು.

ಆರೋಗ್ಯ ಸೇತುಗೆ ಸಂಬಂಧಿಸಿದಂತೆ ಪಲಾಯಾನ ಮತ್ತು ಬೇಜವಾಬ್ದಾರಿ ಪ್ರತಿಕ್ರಿಯೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿರುವ ಸಿಐಸಿ ನಾಲ್ವರು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಷೋಕಾಸ್‌ ನೋಟಿಸ್‌ ನೀಡಿದೆ. ಇದರ ಬೆನ್ನಿಗೆ ಕೇಂದ್ರ ಸರ್ಕಾರವು ಆರೋಗ್ಯ ಸೇತುವನ್ನು ಪಾರದರ್ಶಕವಾಗಿ ರೂಪಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಸಾರ್ವಜನಿಕವಾಗಿ ಸಿಗುತ್ತಿದೆ ಎಂದು ಸ್ಪಷ್ಟೀಕರಣ ನೀಡಿದೆ.

Related Stories

No stories found.
Kannada Bar & Bench
kannada.barandbench.com