
ಹೈದರಾಬಾದ್‌ನ ಕಂಚ ಗಚ್ಚಿಬೌಲಿಯಲ್ಲಿ ಅಧಿಕಾರಿಗಳಿಂದಲೇ ಉಂಟಾದ ಅರಣ್ಯನಾಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಕಠಿಣ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅರಣ್ಯ ಪ್ರದೇಶಗಳನ್ನು ಗುರುತಿಸಲು ತಜ್ಞರ ಸಮಿತಿ ರಚಿಸುವಂತೆ ಮಾರ್ಚ್ 04ರಂದು ನ್ಯಾಯಾಲಯ ಆದೇಶಿಸಿತ್ತು. ಅರಣ್ಯ ಭೂಮಿ ಇಳಿಕೆ ಸೇರಿದಂತೆ ಯಾವುದೇ ಲೋಪಕ್ಕೆ ಮುಖ್ಯ ಕಾರ್ಯದರ್ಶಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.
ತೆಲಂಗಾಣ ಸರ್ಕಾರ ತಜ್ಞರ ಸಮಿತಿ ರಚಿಸಿದ ಕೆಲವೇ ದಿನಗಳಲ್ಲಿ ಅರಣ್ಯ ಗುರುತಿಸುವ ಪ್ರಕ್ರಿಯೆಯನ್ನು ಕೈಗೊಳ್ಳದೆಯೇ ಕಂಚ ಗಚ್ಚಿಬೌಲಿಯಲ್ಲಿ ಅರಣ್ಯೀಕರಣ ಆರಂಭಿಸುವ ಅಸಾಧ್ಯ ತುರ್ತು ಏನಿತ್ತು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಪ್ರಶ್ನಿಸಿತು.
"ಮುಖ್ಯ ಕಾರ್ಯದರ್ಶಿಯವರು ಅದೇ ಸ್ಥಳದಲ್ಲಿ ಕೆರೆ ಬಳಿ ನಿರ್ಮಿಸಲಾದ ತಾತ್ಕಾಲಿಕ ಜೈಲಿಗೆ ಹೋಗಬೇಕಾಗುತ್ತದೆ... ಮುಖ್ಯ ಕಾರ್ಯದರ್ಶಿಯವರು 'ಸರ್ಕಾರಿ ಆತಿಥ್ಯ' ಸವಿಯಲು ಬಯಸಿದರೆ ಅದಕ್ಕೆ, ಯಾರೂ ಸಹಾಯ ಮಾಡಲಾಗದು" ಎಂದು ನ್ಯಾಯಮೂರ್ತಿ ಗವಾಯಿ ಗರಂ ಆದರು.
"ಇದು ತುಂಬಾ ಗಂಭೀರ ವಿಷಯ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಕೂಡ ನ್ಯಾಯಾಲಯ ಇದೇ ವೇಳೆ ನುಡಿಯಿತು.
ಇದಕ್ಕೂ ಮುನ್ನ ಬೆಳಗಿನ ಕಲಾಪದ ವೇಳೆ ಸ್ಥಳದಲ್ಲಿ ಅರಣ್ಯನಾಶದ ವರದಿಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯ ಇನ್ನು ಮುಂದೆ ಮರಗಳನ್ನು ಕಡಿಯದಂತೆ ನೋಡಿಕೊಳ್ಳುವಂತೆ ತೆಲಂಗಾಣ ಸರ್ಕಾರಕ್ಕೆ ತಾಕೀತು ಮಾಡಿತ್ತು.
ತೆಲಂಗಾಣ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಧ್ಯಾಹ್ನ 3:30 ರೊಳಗೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಬೆಳಗಿನ ವಿಚಾರಣೆ ವೇಳೆ ಆದೇಶಿಸಿತ್ತು. ಅಧಿಕಾರಿ ಸ್ಥಳಕ್ಕೆ ಧಾವಿಸಿ ವರದಿಯನ್ನು ಸಲ್ಲಿಸಿದ ನಂತರ ಸಂಜೆ 4 ಗಂಟೆ ಸುಮಾರಿಗೆ ಪ್ರಕರಣವನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡು ಮುಖ್ಯ ಕಾರ್ಯದರ್ಶಿಯವರಿಗೆ ಎಚ್ಚರಿಕೆ ನೀಡಿತು.
ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಕೆ ಪರಮೇಶ್ವರ್ ಅವರು ಅರಣ್ಯ ಪ್ರದೇಶದಲ್ಲಿ ಮರ ಕಡಿಯುತ್ತಿರುವುದನ್ನು ಪ್ರಸ್ತಾಪಿಸಿರುವ ಸುದ್ದಿ ವರದಿಗಳ ಬಗ್ಗೆ ತಿಳಿಸಿದ ನಂತರ ನ್ಯಾಯಾಲಯ ಪ್ರಕರಣದ ವಿಚಾರಣೆಗೆ ಮುಂದಾಗಿತ್ತು.
ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಂಚ ಗಚ್ಚಿಬೌಲಿ ಗ್ರಾಮದ 400 ಎಕರೆ ಜಮೀನನ್ನು ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿಮಿಟೆಡ್, ಹೈದರಾಬಾದ್ (ಟಿಜಿಐಐಸಿ) ಮೂಲಕ ಹರಾಜು ಮಾಡುವ ಪ್ರಸ್ತಾವನೆ ಸರ್ಕಾರದ್ದಾಗಿತ್ತು.