ಕೋವಿಡ್ ಲಸಿಕೆ ತಯಾರಿಸುವ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ ವಿರುದ್ಧ ತನ್ನ ಜಾಲತಾಣದಲ್ಲಿ ಪ್ರಕಟವಾದ ಹದಿನಾಲ್ಕು ಲೇಖನಗಳನ್ನು ತೆಗೆದುಹಾಕುವಂತೆ ತೆಲಂಗಾಣ ನ್ಯಾಯಾಲಯ ಸುದ್ದಿ ಪೋರ್ಟಲ್ ʼದಿ ವೈರ್ʼಗೆ ಸೂಚಿಸಿದೆ.
ಭಾರತ್ ಬಯೋಟೆಕ್ ಮತ್ತು ಅದರ ಉತ್ಪನ್ನವಾದ ಕೋವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಯಾವುದೇ ಮಾನಹಾನಿಕರ ಲೇಖನ ಪ್ರಕಟಿಸದಂತೆ ನ್ಯಾಯಾಲಯ ʼದಿ ವೈರ್ʼಗೆ ನಿರ್ಬಂಧ ವಿಧಿಸಿದೆ. ಪ್ರಕಟಣೆಯನ್ನು ವಿರೋಧಿಸಿ ಭಾರತ್ ಬಯೋಟೆಕ್ ಸಲ್ಲಿಸಿದ್ದ ₹ 100 ಕೋಟಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರಂಗಾ ರೆಡ್ಡಿ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.
ʼದಿ ವೈರ್, ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂʼನ ಪ್ರಕಾಶಕರು,ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಸಿದ್ಧಾರ್ಥ್ ರೋಶನ್‌ಲಾಲ್ ಭಾಟಿಯಾ, ಎಂ ಕೆ ವೇಣು ಹಾಗೂ ಲೇಖನಗಳನ್ನು ಬರೆದ ಇತರ ಒಂಬತ್ತು ಮಂದಿ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಕಂಪನಿಯ ಪ್ರತಿಷ್ಠೆಗೆ ಧಕ್ಕೆ ತರುವ ದುರುದ್ದೇಶದಿಂದ ಭಾರತ್ ಬಯೋಟೆಕ್ ಮತ್ತು ಕೋವಾಕ್ಸಿನ್ ವಿರುದ್ಧ ಸುಳ್ಳು ಆರೋಪ ಒಳಗೊಂಡ ಲೇಖನಗಳನ್ನು 'ದಿ ವೈರ್' ಪ್ರಕಟಿಸಿದೆ ಎಂದು ಭಾರತ್ ಬಯೋಟೆಕ್ ಕಂಪೆನಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ವಿವೇಕ್ ರೆಡ್ಡಿ ವಾದಿಸಿದರು. ಭಾರತ್ ಬಯೋಟೆಕ್ ಈ ಹಿಂದೆ ಕ್ಷಯರೋಗ, ಝೈಕಾ ರೋಟವೈರಸ್, ಚಿಕೂನ್‌ಗುನ್ಯಾ ಹಾಗೂ ಟೈಫಾಯಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು ರಾಷ್ಟ್ರೀಯ ಹಾಗೂ ಜಾಗತಿಕ ಮನ್ನಣೆ ಪಡೆದುಕೊಂಡಿದೆ. ಪ್ರಸ್ತುತ ಲಸಿಕೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಗಳೊಂದಿಗೆ ಸಹಕರಿಸಿದೆ ಎಂದು ರೆಡ್ಡಿ ನ್ಯಾಯಾಲಯಕ್ಕೆ ತಿಳಿಸಿದರು.
ವಾದ ಆಲಿಸಿದ ನ್ಯಾಯಾಲಯ “ಕೇಂದ್ರ ಸರ್ಕಾರ ಲಸಿಕೆಗೆ ಅನುಮೋದನೆ ನೀಡಿದ ಬಳಿಕವೂ 'ದಿ ವೈರ್' ಲೇಖನ ಪ್ರಕಟಣೆ ಮುಂದುವರೆಸಿತು. 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ತಯಾರಿಸಲು ಅಧಿಕಾರವಿರುವ ಏಕಮಾತ್ರ ಸಂಸ್ಥೆ ಭಾರತ್ ಬಯೋಟೆಕ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದರೆ ಅದಕ್ಕೆ ಹಿನ್ನಡೆ ಉಂಟಾಗುತ್ತದೆ” ಎಂದಿತು. ಈ ಹಿನ್ನೆಲೆಯಲ್ಲಿ ಜಾಲತಾಣದಿಂದ ಮಾನಹಾನಿಕರ ಲೇಖನಗಳನ್ನು 48 ಗಂಟೆಗಳ ಒಳಗೆ ತೆಗೆದುಹಾಕುವಂತೆ ಸೂಚಸಿ, ಭಾರತ್ ಬಯೋಟೆಕ್ ಮತ್ತು ಅದರ ಉತ್ಪನ್ನವಾದ ಕೋವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಯಾವುದೇ ಮಾನಹಾನಿಕರ ಲೇಖನ ಪ್ರಕಟಿಸದಂತೆ ನಿರ್ದೇಶಿಸಿತು.