ವಿವೇಕಾನಂದ ರೆಡ್ಡಿ ಹತ್ಯೆ: ಕಡಪ ಸಂಸದ ಅವಿನಾಶ್ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ನಿರೀಕ್ಷಣಾ ಜಾಮೀನು

ಅವಿನಾಶ್ ರೆಡ್ಡಿ ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸುವಂತಹ ಯಾವುದೇ ನೇರ ಸಾಕ್ಷ್ಯ ಲಭ್ಯವಿಲ್ಲ. ಇಡೀ ಪ್ರಕರಣ ಹೇಳಿಕೆ- ಕೇಳಿಕೆ ಸಾಕ್ಷ್ಯವನ್ನಷ್ಟೇ ಅವಲಂಬಿಸಿದೆ ಎಂದು ಪೀಠ ನುಡಿಯಿತು.
YS Avinash Reddy and Telangana High Court
YS Avinash Reddy and Telangana High Court A1
Published on

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್‌ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ಮತ್ತು ಮಾಜಿ ಲೋಕಸಭಾ ಸದಸ್ಯ ವೈ ಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಪ ಸಂಸದ ವೈ ಎಸ್ ಅವಿನಾಶ್ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.

ಅವಿನಾಶ್ ರೆಡ್ಡಿ ಅವರು ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸುವಂತಹ ಯಾವುದೇ ನೇರ ಸಾಕ್ಷ್ಯ ಲಭ್ಯವಿಲ್ಲ ಮತ್ತು ಇಡೀ ಪ್ರಕರಣವು ಹೇಳಿಕೆ-ಕೇಳಿಕೆ ಸಾಕ್ಷ್ಯವನ್ನಷ್ಟೇ ಅವಲಂಬಿಸಿದೆ ಎಂದು ನ್ಯಾ. ಎಂ ಲಕ್ಷ್ಮಣ್ ಅವರಿದ್ದ ಏಕಸದಸ್ಯ ಪೀಠ ನುಡಿದಿದೆ.

“ಆರೋಪದ ಗುರುತ್ವವನ್ನು ಇದುವರೆಗೆ ಸಿಬಿಐ ಸ್ಪಷ್ಟವಾಗಿ ದಾಖಲಿಸಿಲ್ಲ. ಇಡೀ ಪ್ರಕರಣ ಹೇಳಿಕೆ- ಕೇಳಿಕೆ ಸಾಕ್ಷ್ಯ ಮತ್ತು ಕಪೋಲಕಲ್ಪಿತ ಪುರಾವೆಗಳನ್ನು ಆಧರಿಸಿದೆ. ದೊಡ್ಡ ಪಿತೂರಿಯಲ್ಲಿ ಅರ್ಜಿದಾರರು (ಅವಿನಾಶ್‌) ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ನೇರ ಸಾಕ್ಷ್ಯಗಳು ಲಭ್ಯವಿಲ್ಲ. ಸಾಕ್ಷಿಗಳು ಮತ್ತು ಮಾಫಿಸಾಕ್ಷಿಗಳ ಸುಧಾರಿತ ವಾದವನ್ನು ಸಿಬಿಐ ಅವಲಂಬಿಸಿದೆ” ಎಂದು ಪೀಠ ತಿಳಿಸಿದೆ.

ಅಲ್ಲದೆ ಅರ್ಜಿದಾರರು ಅಪರಾಧದ ಸ್ಥಳವನ್ನು ನಾಶಪಡಿಸಿದ್ದಾರೆ ಎಂಬ ಆರೋಪ ಹೊರತುಪಡಿಸಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ ಇಲ್ಲವೇ ಸಾಕ್ಷ್ಯ ನಾಶ ಮಾಡಿದ ಅಥವಾ ಸಾಕ್ಷಿಗಳಿಗೆ ಬೆದರಿಕೆ ಒಡ್ಡಿದ ಬಗ್ಗೆ ಸಿಬಿಐ ಯಾವುದೇ ಸಮಯದಲ್ಲಿ ಯಾವುದೇ ಆರೋಪ ಮಾಡಿಲ್ಲ. ಹಾಗಾಗಿ ಸಿಬಿಐ ಅಧಿಕಾರಿಗಳು ಅರ್ಜಿದಾರರನ್ನು ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ತಿಳಿಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನಿಗೆ ಅನುಮತಿಸಿತು.

ಮಾರ್ಚ್ 2019ರಲ್ಲಿ ಕಡಪಾದಲ್ಲಿನ ವಿವೇಕಾನಂದ ಅವರ ನಿವಾಸದಲ್ಲಿ ಅವರನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು. 2020ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಕೊಲೆಯ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

Kannada Bar & Bench
kannada.barandbench.com