ಟೆಲಿಫೋನ್‌ ಕದ್ದಾಲಿಕೆ ಪ್ರಕರಣ: ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅರ್ಜಿ ಸಿಎಟಿ ಮೂರನೇ ನ್ಯಾಯಾಧೀಶರಿಗೆ ವರ್ಗಾವಣೆ

ಅಲೋಕ್‌ ಕುಮಾರ್‌ ಕುರಿತು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಇಬ್ಬರು ಸದಸ್ಯರ ಪೀಠ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಇದೀಗ ಆ ತೀರ್ಪು ಪ್ರಕಟವಾಗಿದ್ದು, ಅದರಲ್ಲಿ ಸಿಎಟಿ ಸದಸ್ಯರ ನಡುವೆ ಒಮ್ಮತ ಮೂಡಿಲ್ಲ.
IPS Alok Kumar
IPS Alok KumarTwitter
Published on

ಟೆಲಿಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯ ಮೂರನೇ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ.

ಅಲೋಕ್‌ ಕುಮಾರ್‌ ಕುರಿತು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಇಬ್ಬರು ಸದಸ್ಯರ ಪೀಠ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಇದೀಗ ಆ ತೀರ್ಪು ಪ್ರಕಟವಾಗಿದ್ದು, ಅದರಲ್ಲಿ ಸಿಎಟಿ ಸದಸ್ಯರ ನಡುವೆ ಒಮ್ಮತ ಮೂಡಿಲ್ಲ. ನ್ಯಾಯಮೂರ್ತಿ ಬಿ ಕೆ ಶ್ರೀವಾತ್ಸವ ಅವರು ಇಲಾಖಾ ತನಿಖೆ ರದ್ದುಗೊಳಿಸಲು ಆದೇಶ ನೀಡಿದ್ದರೆ, ಮತ್ತೊಬ್ಬ ನ್ಯಾಯಮೂರ್ತಿ ಸಂತೋಷ್‌ ಮೆಹ್ರಾ ಅವರು ಅಲೋಕ್‌ ಕುಮಾರ್‌ ಅರ್ಜಿಯನ್ನು ವಜಾಗೊಳಿಸಿದ್ದರು.

ಹೀಗೆ ಇಬ್ಬರು ನ್ಯಾಯಾಧೀಶರು ಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಲು ಮೂರನೇ ನ್ಯಾಯಾಧೀಶರಿಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ.

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಟೆಲಿಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ಬಿ ರಿಪೋರ್ಟ್‌ ಸಲ್ಲಿಸಿದೆ. ಹೀಗಾಗಿ, ಅಲೋಕ್‌ ಕುಮಾರ್‌ ಸೇರಿದಂತೆ ಇನ್ನಿತರ ಪೊಲೀಸ್‌ ಅಧಿಕಾರಿಗಳ ವಿರುದ್ಧ ಆದೇಶಿಸಲಾಗಿದ್ದ ಇಲಾಖಾ ತನಿಖೆ ಕೈಬಿಡಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದರು. ಆದರೆ ಇಲಾಖಾ ವಿಚಾರಣೆ ಕೈಬಿಡುವ ಆದೇಶ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ.

Also Read
ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೋಟಿಸ್‌ಗೆ ಸಿಎಟಿ ತಡೆ

ಆದರೆ, ಅಷ್ಟರಲ್ಲಿ ಸರ್ಕಾರ ಬದಲಾಗಿ, ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು. ನಂತರ ನೂತನ ಸರ್ಕಾರ ಇಲಾಖಾ ವಿಚಾರಣೆ ಮುಂದುವರಿಸಲು ತೀರ್ಮಾನಿಸಿತ್ತು. ಆ ಸಂಬಂಧ ವಿಚಾರಣೆ ನೋಟಿಸ್‌ ಪ್ರಶ್ನಿಸಿ ಅಲೋಕ್‌ ಕುಮಾರ್‌ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು.

ಇಲಾಖಾ ವಿಚಾರಣೆ ನೋಟಿಸ್‌ ಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಸಿಎಟಿ ತೀರ್ಪು ಕಾಯ್ದಿರಿಸಿತ್ತು. ಇದೀಗ ವಿಭಿನ್ನ ತೀರ್ಪು ಬಂದಿರುವ ಹಿನ್ನೆಲೆ ಮೂರನೇ ನ್ಯಾಯಾಧೀಶರು ಅರ್ಜಿ ಸಿಂಧುತ್ವದ ಬಗ್ಗೆ ತೀರ್ಮಾನಿಸಬೇಕಿದೆ. ಇಲಾಖಾ ವಿಚಾರಣೆ ಬಾಕಿ ಇದೆ ಎಂಬ ಕಾರಣದಿಂದಾಗಿಯೇ ಅಲೋಕ್‌ ಕುಮಾರ್‌ ಮುಂಬಡ್ತಿ ಕೂಡಾ ಬಾಕಿ ಉಳಿದಿದೆ.

Kannada Bar & Bench
kannada.barandbench.com