ಕೋಗಿಲು ಬಡಾವಣೆಯಲ್ಲಿ ಯಾರಿಗೂ ನಿವೇಶನ ಹಂಚಿಕೆಯಾಗಿಲ್ಲ ಎಂದ ಸರ್ಕಾರ; ವರದಿ ಸಲ್ಲಿಸಲು ಕೆಎಸ್‌ಎಲ್‌ಎಸ್‌ಎಗೆ ಸೂಚನೆ

ತೆರವು ಕಾರ್ಯಾಚರಣೆಯಲ್ಲಿ 167 ಮಂದಿ ಸಂತ್ರಸ್ತರಾಗಿದ್ದು, ನಾಲ್ಕು ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲಿಗೆ ಯಾರೂ ಬರುತ್ತಿಲ್ಲ. ಈ ಸಂಬಂಧ ನ್ಯಾಯಾಲಯದ ನಿರ್ದೇಶನದಂತೆ ಅಫಿಡವಿಟ್‌ ಸಲ್ಲಿಸಲಾಗಿದೆ ಎಂದ ಎಜಿ.
Kogilu Layout
Kogilu Layout
Published on

ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್‌ ಕಾಲೊನಿಗಳಲ್ಲಿ ಯಾವುದೇ ವ್ಯಕ್ತಿಗೆ ನಿವೇಶನಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಹಕ್ಕು ಪತ್ರ ನೀಡಲಾಗಿಲ್ಲ. ಕೋಗಿಲು ಬಡಾವಣೆಯ ಹೊರಗೆ ಮೂವರಿಗೆ ಹಕ್ಕು ಪತ್ರ ನೀಡಿರುವ ಮಾಹಿತಿ ಇದ್ದು, ನಾಲ್ಕು ಮಂದಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ವಿವರಿಸಿತು.

ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು ನಿವೇಶನಕ್ಕೆ ತಾತ್ಕಾಲಿಕ ಹಕ್ಕು ಪತ್ರ ನೀಡಿರುವ ಮಾಹಿತಿ ಎಲ್ಲಿ ಎಂದು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರನ್ನು ಕೇಳಿತು. ಅದಕ್ಕೆ ಎಜಿ ಅವರು “ಮೂವರಿಗೆ ಕೋಗಿಲು ಬಡಾವಣೆಯ ಹೊರೆಗೆ ತಾತ್ಕಾಲಿಕ ನಿವೇಶನ ಹಂಚಿಕೆಯಾಗಿದೆ. ಇದೂ ಷರತ್ತಿಗೆ ಒಳಪಟ್ಟಿದೆ. ಉಳಿದ ನಾಲ್ವರ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದರು.

ಇದಕ್ಕೂ ಮುನ್ನ, ಎಜಿ ಅವರು “ತೆರವು ಕಾರ್ಯಾಚರಣೆಯಲ್ಲಿ 167 ಮಂದಿ ಸಂತ್ರಸ್ತರಾಗಿದ್ದು, ನಾಲ್ಕು ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲಿಗೆ ಯಾರೂ ಬರುತ್ತಿಲ್ಲ. ಈ ಸಂಬಂಧ ನ್ಯಾಯಾಲಯದ ನಿರ್ದೇಶನದಂತೆ ಅಫಿಡವಿಟ್‌ ಸಲ್ಲಿಸಲಾಗಿದೆ” ಎಂದರು.

Also Read
ಕೋಗಿಲು ಬಡಾವಣೆ ಒತ್ತುವರಿ ತೆರವಿಗೂ ಮುನ್ನ ಸರ್ಕಾರ ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು: ಹೈಕೋರ್ಟ್‌

ಅರ್ಜಿದಾರರ ಪರ ವಕೀಲರು “ನಾಲ್ಕು ಪುನರ್ವಸತಿ ಕೇಂದ್ರಗಳನ್ನು ಮುಚ್ಚಲಾಗಿದೆ. ಸಂಪರ್ಕ ಸಂಖ್ಯೆಯೂ ಸರಿಯಾಗಿಲ್ಲ. ಬಿಬಿಎಂಪಿಗೆ ತೆರವು ಕಾರ್ಯಾಚರಣೆ ನಡೆಸುವ ಅಧಿಕಾರವಿಲ್ಲ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ವಕೀಲೆ ಬಿ ವಿ ವಿದ್ಯುಲ್ಲತಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿತು. ಅಲ್ಲದೇ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ವರದಿ ನೀಡಬೇಕು ಮತ್ತು ಅಮಿಕಸ್‌ ಕ್ಯೂರಿಗೆ ನೆರವಾಗಬೇಕು” ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.

Kannada Bar & Bench
kannada.barandbench.com