ಕೈದಿಗಳಿಗೆ ಅಪಾಯ ಮಾಡುವುದರಲ್ಲಿ ಯಶಸ್ವಿಯಾಗದ ಕೋವಿಡ್‌, ಆರೋಪಿಗಳು ಜೈಲಿನಲ್ಲಿ ಹೆಚ್ಚು ಸುರಕ್ಷಿತ: ಮುಂಬೈ ನ್ಯಾಯಾಲಯ

ಹೊರಗಿರುವ ಸಾಮಾನ್ಯ ಜನರು ಸಾಮಾಜಿಕ ವಾತಾವರಣಕ್ಕೆ ಹೆಚ್ಚು ತೆರೆದುಕೊಳ್ಳುವುದಕ್ಕೆ ಹೋಲಿಕೆ ಮಾಡಿದರೆ ಜೈಲಿನಲ್ಲಿರುವ ಕೈದಿಗಳು ಹೆಚ್ಚು ಸುರಕ್ಷಿತವಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.
ಕೈದಿಗಳಿಗೆ ಅಪಾಯ ಮಾಡುವುದರಲ್ಲಿ ಯಶಸ್ವಿಯಾಗದ ಕೋವಿಡ್‌, ಆರೋಪಿಗಳು ಜೈಲಿನಲ್ಲಿ ಹೆಚ್ಚು ಸುರಕ್ಷಿತ: ಮುಂಬೈ ನ್ಯಾಯಾಲಯ

ಹೊರ ಜಗತ್ತಿಗೆ ಹೋಲಿಕೆ ಮಾಡಿದರೆ ಜೈಲು ಹೆಚ್ಚು ಸುರಕ್ಷಿತವಾಗಿದೆ ಎಂದಿರುವ ಮುಂಬೈ ನ್ಯಾಯಾಲಯವು ಕೋವಿಡ್‌ ಎರಡನೇ ಅಲೆ ಮತ್ತು ಬ್ಲ್ಯಾಕ್‌ ಫಂಗಸ್‌ ಹಿನ್ನೆಲೆಯಲ್ಲಿ ಜೋಡಿ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಮನವಿಯನ್ನು ಈಚೆಗೆ ವಜಾ ಮಾಡಿದೆ.

ಕೋವಿಡ್‌ ನಿಯಂತ್ರಿಸಲು ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರಿಂದ ವೈರಸ್‌ ಜೈಲಿನಲ್ಲಿ ಕೈದಿಗಳಿಗೆ ಹೆಚ್ಚು ಸಮಸ್ಯೆ ಮಾಡುವುದರಲ್ಲಿ ಯಶಸ್ವಿಯಾಗಿಲ್ಲ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಡಿ ಡಿ ಕೋಚೆ ಹೇಳಿದ್ದಾರೆ.

“ಸಮಾಜದಲ್ಲಿ ದೈನಂದಿನ ಕೆಲಸ ಮಾಡುವಾಗ ಹೊರಗಿನ ವಾತಾವರಣಕ್ಕೆ ತೆರೆದುಕೊಳ್ಳುವ ಜನರಿಗೆ ಹೋಲಿಕೆ ಮಾಡಿದರೆ ಜೈಲಿನಲ್ಲಿರುವ ಅರ್ಜಿದಾರರು/ಆರೋಪಿಗಳು ಸುರಕ್ಷಿತರಾಗಿದ್ದಾರೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕೋವಿಡ್‌ ಎರಡನೇ ಅಲೆಯ ಸಾಂಕ್ರಾಮಿಕವು ತಹಬಂದಿಗೆ ಬಂದಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕಲಾವಿದ ಚಿಂತನ್‌ ಉಪಾಧ್ಯಾಯ ಮತ್ತು ಪ್ರದೀಪ್‌ ರಾಜಭರ್‌ ಅವರು ಕೋವಿಡ್‌ ಹಿನ್ನೆಲೆಯಲ್ಲಿ ಜಾಮೀನು ಕೋರಿದ್ದ ಆರೋಪಿಗಳು. ಉಪಾಧ್ಯಾಯ ಅವರ ಪತ್ನಿ ಮತ್ತು ಆಕೆಯ ವಕೀಲರ ಕೊಲೆ ಆರೋಪ ಇವರಿಬ್ಬರ ಮೇಲಿದೆ.

ಜೈಲಿನಲ್ಲಿ ಪರಿಸ್ಥಿತಿಯು ದಯನೀಯವಾಗಿದ್ದು, ನೂತನ ಕೋವಿಡ್‌ ತಳಿಯು ಶರವೇಗದಲ್ಲಿ ಹಬ್ಬುತ್ತಿದೆ. ಹೊಸ ತಳಿಯ ವೈರಸ್‌ನೊಂದಿಗೆ ಬ್ಲ್ಯಾಕ್‌ ಫಂಗಸ್‌ ದಾಳಿ ಇಟ್ಟಿದೆ ಎಂದು ಆರೋಪಿಗಳು ಜಾಮೀನು ಮನವಿಯಲ್ಲಿ ವಿವರಿಸಿದ್ದರು. ಇದರ ಜೊತೆಗೆ, ಕಳೆದ ಐದೂವರೆ ವರ್ಷದಿಂದ ತಾನು ಜೈಲಿನಲ್ಲಿದ್ದು ತನ್ನ ಮೇಲೆ ವೃದ್ಧ ತಂದೆ ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯಿದೆ ಎಂದು ಉಪಾಧ್ಯಾಯ ತಮ್ಮ ಮನವಿಯಲ್ಲಿ ಹೇಳಿದ್ದರು.

Also Read
[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

“ಕೋವಿಡ್‌ ಹಿನ್ನೆಲೆಯಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ವಿಚಾರಣೆ ನಡೆಸುತ್ತಿರುವುದರಿಂದ ಮತ್ತಷ್ಟು ಸಮಯದವರೆಗೆ ಆರೋಪಿಗಳು/ಅರ್ಜಿದಾರರು ಜೈಲಿನಲ್ಲಿ ಉಳಿಯಬೇಕಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣವನ್ನು ಇತ್ಯರ್ಥಪಡಿಸುವ ಸಂಬಂಧ ವಿಚಾರಣಾಧೀನ ನ್ಯಾಯಾಲಯವು ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದಿರುವ ನ್ಯಾಯಾಲಯವು ಜಾಮೀನು ಮನವಿಯನ್ನು ವಜಾ ಮಾಡಿದೆ.

“ಪ್ರಸಕ್ತ ವಾರ ಅಥವಾ ಮುಂದಿನ ವಾರದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ಮೊದಲಿನಂತೆ ನ್ಯಾಯಾಲಯವು ಕಾರ್ಯಾರಂಭ ಮಾಡಲಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಇಬ್ಬರು ಆರೋಪಿಗಳು ಸಲ್ಲಿಸಿರುವ ಜಾಮೀನು ಮನವಿಯನ್ನು ಪರಿಗಣಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com