ಆನೆಗಳ ಮೆರವಣಿಗೆ: ಮಾರ್ಗಸೂಚಿ ರೂಪಿಸಲಿರುವ ಕೇರಳ ಹೈಕೋರ್ಟ್

ಸಮುದ್ರ ಜೀವಿಯಾದ ನೀಲಿ ತಿಮಿಂಗಲ ನೆಲದ ಮೇಲೆ ವಾಸಿಸುತ್ತಿದ್ದರೆ ಅವುಗಳಿಗೂ ಆನೆಗಳಿಗಾದ ಗತಿಯೇ ಆಗುತ್ತಿತ್ತು ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
Elephant
ElephantImage for representative purpose
Published on

ಧಾರ್ಮಿಕ ಉತ್ಸವ, ಸಾಮಾಜಿಕ ಕಾರ್ಯಕ್ರಮಗಳು ನಡೆಯುವ ವೇಳೆ ಆನೆಗಳ ಮೆರವಣಿಗೆ ನಡೆಸಿ ಅವುಗಳ ಶೋಷಣೆ ಮಾಡದಂತೆ ರಕ್ಷಿಸಲು ಅಧಿಕೃತ ನಿಯಮಾವಳಿ ಜಾರಿಗೆ ಬರಬೇಕಿದ್ದು ಅಲ್ಲಿಯವರೆಗೆ ಮಾರ್ಗಸೂಚಿ ರೂಪಿಸುವುದಾಗಿ ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ [ಕೆಪ್ಟೀವ್‌ ಎಲಿಫೆಂಟ್ಸ್‌ ಮತ್ತು ಭಾರತ ಒಕ್ಕೂಟ ನಡುವಣ ಸ್ವಯಂ ಪ್ರೇರಿತ ಮೊಕದ್ದಮೆ]

ಮೆರವಣಿಗೆಯ ಸಮಯದಲ್ಲಿ ಆನೆಗಳ ಮೇಲೆ ತೀವ್ರವಾದ ಕ್ರೌರ್ಯ ನಡೆಯುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಗೋಪಿನಾಥ್ ಪಿ ಅವರಿದ್ದ ವಿಭಾಗೀಯ ಪೀಠ ಅಂತಹ ಆಚರಣೆಗಳನ್ನು ನಿಲ್ಲಿಸಬೇಕಿದೆ ಎಂದಿತು.

Also Read
ಸಾವನ್ನಪ್ಪುತ್ತಿರುವ ಸೆರೆ ಹಿಡಿದ ಆನೆಗಳು: ಬೇರೆ ರಾಜ್ಯಗಳಿಂದ ಆನೆ ತರದಂತೆ ಆದೇಶ ಹೊರಡಿಸಿದ ಕೇರಳ ಹೈಕೋರ್ಟ್

ಸಮುದ್ರ ಜೀವಿಯಾದ ನೀಲಿ ತಿಮಿಂಗಲ ನೆಲದ ಮೇಲೆ ವಾಸಿಸುತ್ತಿದ್ದರೆ ಅವುಗಳಿಗೂ ಆನೆಗಳಿಗಾದ ಗತಿಯೇ ಆಗುತ್ತಿತ್ತು ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

“ನೆಲದ ಮೇಲಿನ ಅತಿ ದೊಡ್ಡ ಪ್ರಾಣಿಯ ಮೇಲೆ ತನ್ನ ಭಗವಂತನ ವಿಗ್ರಹವನ್ನಿಟ್ಟು ಮೆರವಣಿಗೆ ಮಾಡುವುದು ಮನುಷ್ಯನಿಗೆ ಪ್ರತಿಷ್ಠೆಯ ವಿಚಾರವಾಗಿದೆ. ದೇವರಿಗೆ ಧನ್ಯವಾದಗಳು, ನೀಲಿ ತಿಮಿಂಗಿಲಗಳು ನೆಲದ ಮೇಲೆ ವಾಸಿಸುತ್ತಿಲ್ಲ; ಇಲ್ಲದಿದ್ದರೆ, ಆನೆಗಳನ್ನು ಬಿಟ್ಟು ನಾವು ಅವುಗಳದೇ ಮೆರವಣಿಗೆ ಮಾಡುತ್ತೇವೆ ಎನ್ನುತ್ತಿದ್ದರು. ಇದು ಆಚರಣೆ ಎನಿಸಿಕೊಳ್ಳದೆ ಮೊಂಡುತನ ಎನಿಸಿಕೊಳ್ಳುತ್ತದೆ” ಎಂದು ನ್ಯಾಯಮೂರ್ತಿ ಗೋಪಿನಾಥ್ ಟೀಕಿಸಿದರು.

ಹಬ್ಬಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಆನೆಗಳನ್ನು ಮೆರವಣಿಗೆ ಮಾಡುವ ರೂಢಿ ಸಂಪೂರ್ಣವಾಗಿ ವಾಣಿಜ್ಯ ಉದ್ದೇಶದಿಂದ ಕೂಡಿದ್ದು ಅದರ ಹಿಂದಿನ ಪ್ರೇರಣೆಗಳು ನಿಜವಾಗಿಯೂ ಸಾಂಸ್ಕೃತಿಕ ಅಥವಾ ಧಾರ್ಮಿಕ ಪ್ರಾಮುಖ್ಯತೆಗಿಂತ ಲಾಭವನ್ನು ಆಧರಿಸಿವೆ  ಎಂದು ನ್ಯಾಯಾಲಯ ಟೀಕಿಸಿತು.

ಆದರಿಂದ ಸೆರೆಹಿಡಿದ ಆನೆಗಳ ಯೋಗಕ್ಷೇಮಕ್ಕಾಗಿ ಕಟ್ಟುನಿಟ್ಟಾದ ನಿಯಂತ್ರಣದ ಅಗತ್ಯವಿದೆ ಎಂದು ಅದು ಅಭಿಪ್ರಾಯಪಟ್ಟಿದೆ. ಆನೆಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಸೂಚಿಸಿದ ನಿಯಮಗಳಲ್ಲಿ ಗಮನಾರ್ಹ ಲೋಪಗಳಿವೆ ಎಂದ ಅದು ಲೋಪದೋಷಗಳನ್ನು ಪರಿಹರಿಸಲು ಕರಡು ಮಾರ್ಗಸೂಚಿ ರೂಪಿಸುವುದಾಗಿ ತಿಳಿಸಿದೆ.

Also Read
ಕೇರಳದಲ್ಲಿ ಕಳೆದ ಎಂಟು ವರ್ಷಗಳಲ್ಲಿ 845 ಆನೆ ಸಾವು: ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದ ಎನ್‌ಜಿಟಿ

ರಾಜ್ಯದಲ್ಲಿ ಸೆರೆಹಿಡಿದ ಆನೆಗಳ ಕಲ್ಯಾಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಪ್ರಾಣಿ ಹಿಂಸೆಗೆ ಸಂಬಂಧಿಸಿದಂತೆ ಜುಲೈ 2021ರಲ್ಲಿ ಸ್ವಯಂ ಪ್ರೇರಿತ ಮೊಕದ್ದಮೆಯಡಿ ಈ ಪ್ರಕರಣವನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು.

ರಾಜ್ಯದಲ್ಲಿ ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಸಂದರ್ಭಗಳು ಉಂಟಾದಾಗ ನ್ಯಾಯಾಲಯವು ನಿಗಾ ವಹಿಸಲು ಅಥವಾ ಮಧ್ಯಪ್ರವೇಶಿಸಲು ಸಾಧ್ಯವಾಗುವಂತೆ ಪಿಐಎಲ್‌ ಅನ್ನು ವಿಚಾರಣೆ ಮುಕ್ತಾಯಗೊಳಿಸದೆ ಮುಕ್ತವಾಗಿ ಇರಿಸಲಾಗಿತ್ತು. ನವೆಂಬರ್ 4ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com