ಭೂ ಮಾಲೀಕರಿಗೆ ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಗುಳಿಮಂಗಲ ಗ್ರಾಮದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕಾಗಿ ಎರಡು ದಶಕಗಳ ಹಿಂದೆ ರಾಜ್ಯ ಸರ್ಕಾರ ಹೊರಡಿಸಿದ್ದ ಭೂ ಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿ ಈಚೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಭೂ ಸ್ವಾಧೀನಕ್ಕೆ ಹೊರಡಿಸಲಾಗಿದ್ದ ಅಧಿಸೂಚನೆ ಮತ್ತು ಪರಿಹಾರ ಘೋಷಿಸಿ 2021ರ ಜನವರಿ 7ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸುರೇಶ್ ಕುಮಾರ್ ಮತ್ತಿತರೆ ಹಾಗೂ ಮತ್ತಿತರ ಭೂ ಮಾಲೀಕರು ಸಲ್ಲಿಸಿದ್ದ ಹಲವು ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಪೀಠವು ಮಾನ್ಯ ಮಾಡಿದೆ.
ಭೂ ಸ್ವಾಧೀನ ಕಾಯಿದೆ-1994ರ ಪ್ರಕಾರ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ಎರಡು ವರ್ಷದಲ್ಲಿ ಪರಿಹಾರ ವಿತರಿಸಬೇಕು. ಭೂ ಸ್ವಾಧೀನದಲ್ಲಿ ನ್ಯಾಯಯುತ ಪರಿಹಾರ, ಪಾರದರ್ಶಕತೆ ಮತ್ತು ಪುನರ್ವಸತಿ ಕಾಯಿದೆ-2013ರ ಸೆಕ್ಷನ್ 25ರ ಪ್ರಕಾರ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿದ 12 ತಿಂಗಳಲ್ಲಿ ಪರಿಹಾರ ವಿತರಿಸಬೇಕು. ಇಲ್ಲವಾದರೆ ಇಡೀ ಭೂ ಸ್ವಾಧೀನ ಪ್ರಕ್ರಿಯೆ ಮಾನ್ಯತೆ ಕಳೆದುಕೊಳ್ಳುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪ್ರಕರಣದಲ್ಲಿ ಭೂ ಸ್ವಾಧೀನ ಕಾಯಿದೆ-1894ರ ಸೆಕ್ಷನ್ 4(1) ಸೆಕ್ಷನ್ ಅಡಿಯಲ್ಲಿ ಭೂ ಸ್ವಾಧೀನಕ್ಕಾಗಿ 2002ರ ಮೇ 20ರಂದು ಪ್ರಾಥಮಿಕ ಮತ್ತು 2003ರ ಆಗಸ್ಟ್ 2ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 2018ರ ನವೆಂಬರ್ 20ರಂದು ಭೂ ಪರಿಹಾರ ಅನುಮೋದನೆ ಪ್ರಕ್ರಿಯೆ ಆರಂಭವಾಗಿದೆ. 2021ರ ಜನವರಿ 7ರಂದು ಪರಿಹಾರ ವಿತರಣೆಗೆ ಆದೇಶ ಹೊರಡಿಸಲಾಗಿದೆ. ಸದ್ಯ ನಾವು 2022ರಲ್ಲಿದ್ದೇವೆ. ಅಂದರೆ ಪ್ರಕರಣದಲ್ಲಿ ಯಾವ ರೀತಿಯಿಂದ ನೋಡಿದರೂ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿದ ದಿನದಿಂದ ಎರಡು ವರ್ಷದೊಗಳಗೆ ಪರಿಹಾರ ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಪೀಠ ಹೇಳಿದೆ.
ಅಲ್ಲದೆ, ಪರಿಹಾರ ವಿತರಣೆಗೆ ಭೂ ಸ್ವಾಧೀನ ಕಾಯಿದೆಯಲ್ಲಿ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಿರುವಾಗ ಅದಕ್ಕೆ ರಾಜ್ಯ ಸರ್ಕಾರ ಮತ್ತು ವಿಶೇಷ ಭೂ ಸ್ವಾಧೀನ ಅಧಿಕಾರಿ ಬದ್ಧರಾಗಿರಬೇಕು. ಇಲ್ಲವಾದರೆ ಭೂಮಿ ಕಳೆದುಕೊಂಡವರ ಹಿತಾಸಕ್ತಿ ದೃಷ್ಟಿಯಿಂದ ಇಡೀ ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಬೇಕಾಗುತ್ತದೆ. ಭೂ ಸ್ವಾಧೀನ ಪ್ರಕ್ರಿಯೆ ಉಳಿಸಬೇಕು ಎಂಬ ಕಾರಣಕ್ಕೆ ಉದ್ದೇಶದಿಂದ ಫಲಾನುನುಭವಿಗಳಿಗೆ ಹಾನಿಯಾಗಬಾರದು ಎಂದು ಕಾಳಜಿ ವ್ಯಕ್ತಪಡಿಸಿರುವ ನ್ಯಾಯಾಲಯವು ಪ್ರಕರಣದಲ್ಲಿ ಭೂ ಸ್ವಾಧೀನಕ್ಕೆ ಹೊರಡಿಸಿದ ಅಧಿಸೂಚನೆಯನ್ನು ರದ್ದುಪಡಿಸಿದೆ.
ಅಂತೆಯೇ, ಭೂ ಮಾಲೀಕರು ಪ್ರಕರಣದಲ್ಲಿ ತಮಗಾದ ನಷ್ಟವನ್ನು ವಸೂಲಿ ಮಾಡಲು ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಸ್ವತಂತ್ರರಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.