ಕೇರಳ ಸ್ಟೋರಿ ಚಿತ್ರದ ಬಿಡುಗಡೆಗೆ ತಡೆ ನೀಡಲು ಅಥವಾ ಟ್ರೈಲರ್ ಮತ್ತಿತರ ದೃಶ್ಯಾವಳಿ ತೆಗೆದುಹಾಕಲು ನಿರಾಕರಿಸಿದ ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿ ಸೂಚಿಸಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದೆದುರು ಅರ್ಜಿ ಉಲ್ಲೇಖಿಸಿದರು. ಆಗ ಮೇ 15ರ ಸೋಮವಾರದಂದು ಈ ವಿಷಯವನ್ನು ಪಟ್ಟಿ ಮಾಡಲು ಸಿಜೆಐ ಒಪ್ಪಿದರು.
ಮೇ 5ರಂದು ಕೇರಳ ಹೈಕೋರ್ಟ್ ಚಿತ್ರ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿತ್ತು. ಚಿತ್ರದ ಟೀಸರ್ ಮತ್ತು ಟ್ರೇಲರ್ ವೀಕ್ಷಿಸಿದ ನಂತರ, ಇಸ್ಲಾಂ ಅಥವಾ ಒಟ್ಟಾರೆ ಮುಸ್ಲಿಮರ ವಿರುದ್ಧವಾದಂತಹ ಅಂಶಗಳು ಇದರಲ್ಲಿ ಇಲ್ಲ. ಬದಲಿಗೆ ಇದು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾಗೆ (ಐಎಸ್ಐಎಸ್) ಗೆ ಸಂಬಂಧಿಸಿದ್ದಾಗಿದೆ ಎಂದು ನ್ಯಾಯಮೂರ್ತಿಗಳಾದ ಎನ್ ನಗರೇಶ್ ಮತ್ತು ಸೋಫಿ ಥಾಮಸ್ ಅವರಿದ್ದ ಪೀಠ ತೀರ್ಪು ನೀಡಿತ್ತು.
ʼಕೇರಳ ಸ್ಟೋರಿʼ ಎಂಬುದು ಕೇರಳದ ಮಹಿಳೆಯರ ಗುಂಪು ಐಸಿಸ್‌ಗೆ ಸೇರುವ ಕುರಿತಾದ ಹಿಂದಿ ಚಲನಚಿತ್ರವಾಗಿದೆ. ಚಿತ್ರ ಮೇ 5 ರಂದು ಬಿಡುಗಡೆಯಾಗಿದೆ.