ಮಕ್ಕಳಿಗೆ ಹಬ್ಬದೂಟ ಉಣಬಡಿಸದೇ ಪಾನಮತ್ತಳಾಗಿದ್ದ ಪತ್ನಿಯ ಹತ್ಯೆ ಉದ್ದೇಪೂರ್ವಕವಲ್ಲವೆಂದು ಶಿಕ್ಷೆ ತಗ್ಗಿಸಿದ ಹೈಕೋರ್ಟ್‌

ವಿಚಾರಣಾಧೀನ ನ್ಯಾಯಾಲಯವು ಸುರೇಶ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿದ ಪೀಠವು ಈಗಾಗಲೇ ಆರೋಪಿ 6 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಆನುಭವಿಸಿರುವುದರಿಂದ ತಕ್ಷಣ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ.
Karnataka High Court
Karnataka High Court
Published on

ಹಬ್ಬದ ದಿನ ಅಡುಗೆ ಮಾಡದೆ ಹಾಗೂ ಮಕ್ಕಳಿಗೆ ಊಟ ಕೊಡದೆ ಪಾನಮತ್ತಳಾಗಿ ಮಲಗಿದ್ದ ಪತ್ನಿಯನ್ನು ಆವೇಶದಿಂದ ಮನೆಯಲ್ಲಿದ್ದ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ ಪತಿಯ ಕೃತ್ಯವನ್ನು ‘ಉದ್ದೇಪೂರ್ವಕವಲ್ಲದ ನರಹತ್ಯೆ’ ಎಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಅಪರಾಧಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿದೆ.

ಪತ್ನಿ ರಾಧಾಳನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸುರೇಶ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ಭಾಗಶಃ ಮಾನ್ಯ ಮಾಡಿದೆ.

ಪತ್ನಿಯನ್ನು ಕೊಲೆ ಮಾಡುವ ಉದ್ದೇಶ ಸುರೇಶ್‌ಗೆ ಇರಲಿಲ್ಲ. ಗೌರಿ ಹಬ್ಬದ ದಿನ ಅಡುಗೆ ಮಾಡಿಲ್ಲ. ಮಕ್ಕಳಿಗೆ ಊಟ ಕೊಟ್ಟಿಲ್ಲ. ಮದ್ಯಪಾನ ಮಾಡಿ ಮಲಗಿದ್ದಾರೆ ಎಂಬ ಕಾರಣದಿಂದ ಕೋಪಗೊಂಡ ಸುರೇಶ್, ಪತ್ನಿಗೆ ಆವೇಶದಿಂದ ದೊಣ್ಣೆಯಿಂದ ಹೊಡೆದಿದ್ದಾರೆ. ಇದರಿಂದ ಆಕೆ ಸಾವನ್ನಪ್ಪಿದ್ದರು. ಮೃತ ಮಹಿಳೆ ಮದ್ಯ ವ್ಯಸನಿಯಾಗಿದ್ದರು ಎಂಬುದನ್ನೂ ಸಾಕ್ಷಿಗಳು ದೃಢಪಡಿಸುತ್ತವೆ. ಹೀಗಾಗಿ, ಪತಿಯ ಕೃತ್ಯವನ್ನು ಕೊಲೆ ಎಂದು ಪರಿಗಣಿಸಲಾಗದು. ಬದಲಿಗೆ ಉದ್ದೇಶಪೂರ್ವಕವಲ್ಲದ ನರಹತ್ಯೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ವಿಚಾರಣಾಧೀನ ನ್ಯಾಯಾಲಯವು ಸುರೇಶ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿದ ಪೀಠವು ಈಗಾಗಲೇ ಆರೋಪಿ 6 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಆನುಭವಿಸಿರುವ ಹಾಗೂ ಆತನ ಮೇಲೆ ಬೇರೆ ಯಾವುದೇ ಪ್ರಕರಣ ಇಲ್ಲದಿರುವ ಹಿನ್ನೆಲೆಯಲ್ಲಿ ತಕ್ಷಣ ಜೈಲಿನಿಂದ ಬಿಡುಗಡೆ ಮಾಡುವಂತೆ ಜೈಲಿನ ಮೇಲ್ವಿಚಾರಣಾಧಿಕಾರಿಗೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸುರೇಶ ತನ್ನ ಮೊದಲ ಪತ್ನಿ ಮೀನಾಕ್ಷಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೇ ವೇಳೆ ರಾಧಾ ಸಹ ತನ್ನ ಮೊದಲ ಪತಿಯನ್ನು ತೊರೆದಿದ್ದರು. ನಂತರ ಸುರೇಶ ಮತ್ತು ರಾಧಾ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. 2016ರಲ್ಲಿ ಗೌರಿ ಹಬ್ಬದ ದಿನ ಸುರೇಶ ಮನೆಗೆ ಬಂದಾಗ ಪತ್ನಿಯು ಹಬ್ಬ ಆಚರಿಸದೆ, ಅಡುಗೆ ಮಾಡಿ ಮಕ್ಕಳಿಗೂ ಊಟ ಕೊಡದೆ ಪಾನಮತ್ತಳಾಗಿ ಮಲಗಿರುವುದನ್ನು ಕಂಡರು. ಇದರಿಂದ ಕೋಪಗೊಂಡ ಸುರೇಶ ದೊಣ್ಣೆಯಿಂದ ಹೊಡೆದಿದ್ದರಿಂದ ಆಕೆ ಸಾವನ್ನಪ್ಪಿದ್ದರು. 2017ರಲ್ಲಿ ವಿಚಾರಣಾಧೀನ ನ್ಯಾಯಲಯವು ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸುರೇಶ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com