[ಜೀವಾ ಆತ್ಮಹತ್ಯೆ ಪ್ರಕರಣ] ಡಿವೈಎಸ್‌ಪಿ ಕನಕಲಕ್ಷ್ಮಿ ಬಂಧನ ತಕ್ಷಣಕ್ಕಿಲ್ಲ: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಹೇಳಿಕೆ

ರಾಜ್ಯ ಸರ್ಕಾರವೇ ಬಂಧನದ ಬಗ್ಗೆ ಕನಕಲಕ್ಷ್ಮಿ ಆತಂಕಗೊಳ್ಳಬೇಕಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
Karnataka HC and Justice Mohammad Nawaz
Karnataka HC and Justice Mohammad Nawaz
Published on

ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖಾ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ವಕೀಲೆ ಎಸ್‌ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಉಪ ಪೊಲೀಸ್‌ ವರಿಷ್ಠಾಧಿಕಾರಿ ಬಿ ಎಂ ಕನಕಲಕ್ಷ್ಮಿ ಅವರನ್ನು ತಕ್ಷಣಕ್ಕೆ ಬಂಧಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಸರ್ಕಾರಿ ಅಧಿಕಾರಿಯನ್ನು ಲಂಚದ ಮೂಲಕ ಪ್ರಭಾವಿಸುವುದು ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಬಿ ಎಂ ಕನಕಲಕ್ಷ್ಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ರಾಜ್ಯ ಸರ್ಕಾರವು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದು, ಅದರಲ್ಲಿ ಕನಕಲಕ್ಷ್ಮಿ ಅವರನ್ನು ತಕ್ಷಣಕ್ಕೆ ಬಂಧಿಸುವುದರ ಸಂಬಂಧ ಆತಂಕ ಹೊಂದಬೇಕಿಲ್ಲ. ತನಿಖೆ ನಡೆಯುತ್ತಿದ್ದು, ಸಾಕ್ಷಿಗಳ ಹೇಳಿಕೆಯನ್ನು ವೈಜ್ಞಾನಿಕ ಸಾಕ್ಷಿಯೊಂದಿಗೆ ದೃಢೀಕರಿಸಬೇಕಿದೆ ಎಂದು ಹೇಳಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ರಾಜ್ಯ ಸರ್ಕಾರವೇ ಬಂಧನದ ಬಗ್ಗೆ ಕನಕಲಕ್ಷ್ಮಿ ಆತಂಕಗೊಳ್ಳಬೇಕಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಕನಕಲಕ್ಷ್ಮಿ ವಿರುದ್ಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 108 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 7(a) ಅಡಿ ಪ್ರಕರಣ ದಾಖಲಿಸಲಾಗಿದೆ.

Also Read
[ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ] ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಡಿವೈಎಸ್‌ಪಿ ಕನಕಲಕ್ಷ್ಮಿ

ಕನಕಲಕ್ಷ್ಮಿ ಅವರು ಭೋವಿ ಹಗರಣದ ತನಿಖೆಯ ನೆಪದಲ್ಲಿ ನೀಡಿದ ಕಿರುಕುಳದಿಂದ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ಈ ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯವು “ತನಿಖೆಗೆ ಹಾಜರಾಗುವಂತೆ ಕನಕಲಕ್ಷ್ಮಿ ಅವರಿಗೆ ನೋಟಿಸ್‌ ಯಾಕೆ ನೀಡಿಲ್ಲ. ಕನಕಲಕ್ಷ್ಮಿ ಅವರನ್ನು ಏಕೆ ಸಾಮಾನ್ಯ ಆರೋಪಿ ಎಂದು ಪರಿಗಣಿಸಿಲ್ಲ? ಆಕೆ ಪೊಲೀಸ್‌ ಅಧಿಕಾರಿ ಎಂದ ಮಾತ್ರಕ್ಕೆ ಕಾನೂನು ಮೀರಬಹುದೇ? ಆರೋಪಿತ ಅಧಿಕಾರಿ ಆರಾಮಾವಾಗಿ ಓಡಾಡಿಕೊಂಡಿದ್ದಾರೆ. ಇದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ನೀವು ಬಿಡುತ್ತಿದ್ದೀರಾ? ಹತ್ತು ವರ್ಷಗಳ ಶಿಕ್ಷೆ ಆಗುವ ಸಂಜ್ಞೇ ಅಪರಾಧದಲ್ಲಿ ಯಾರನ್ನೂ ಬಂಧಿಸಿಲ್ಲ! ಇಂಥ ಪ್ರಕರಣಗಳಲ್ಲಿ ಅರ್ನೇಶ್‌ ಕುಮಾರ್‌ ಪ್ರಕರಣದ ಆದೇಶ ಪಾಲಿಸುತ್ತೀರಿ, ಬಡಪಾಯಿ ಸಿಲುಕಿಕೊಂಡರೆ ಕಾಟ ಕೊಡುತ್ತೀರಿ" ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದು.

ಜೀವಾ ಆತ್ಮಹತ್ಯೆ ತನಿಖೆಯ ಜವಾಬ್ದಾರಿಯನ್ನು ಸಿಬಿಐನ ಒಬ್ಬರು ಮತ್ತು ರಾಜ್ಯ ಕೇಡರ್‌ನ ಇಬ್ಬರು ಐಪಿಸಿ ಅಧಿಕಾರಿಗಳನ್ನು ಒಳಗೊಂಡ ಮೂವರ ಎಸ್‌ಐಟಿ ತಂಡಕ್ಕೆ ಹೈಕೋರ್ಟ್‌ ನೀಡಿದೆ.

Kannada Bar & Bench
kannada.barandbench.com