

ತಮಿಳಿನ ಪೊನ್ನಿಯಿನ್ ಸೆಲ್ವನ್ 2 ಚಿತ್ರದ 'ವೀರ ರಾಜ ವೀರ' ಹಾಡಿನ ಸಂಯೋಜನೆಯ ಕುರಿತು ಸಲ್ಲಿಸಲಾದ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಗೆ ಸಂಬಂಧಿಸಿದಂತೆ ದ್ರುಪದ್ ಹಿಂದೂಸ್ತಾನಿ ಸಂಗೀತದ ಗಾಯಕ ಉಸ್ತಾದ್ ಫೈಯಾಜ್ ವಾಸಿಫುದ್ದೀನ್ ಡಾಗರ್ ಅವರಿಗೆ ಮನ್ನಣೆ ದೊರೆಯಬೇಕು ಎಂದು ಸುಪ್ರೀಂ ಕೋರ್ಟ್ ಹಿರಿಯ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರಿಗೆ ಶುಕ್ರವಾರ ಕಿವಿಮಾತು ಹೇಳಿತು.
ಮೂಲ ಯಾರದ್ದು ಎಂಬುದಕ್ಕೆ ಸಂಬಂಧಿಸಿದಂತೆ ಡಾಗರ್ ಪರವಾದ ಮೇಲ್ನೋಟದ ವಾದ ಸಾಬೀತಾಗಿದೆ ಆದರೆ ಕೃತಿಯ ರಚನೆ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಬೇಕಿದೆ. ಉಸ್ತಾದ್ ಅವರನ್ನು ಮೊದಲಿಗೆ ಹಾಡಿದ್ದರು ಎಂದಮಾತ್ರಕ್ಕೆ ಹಾಡಿನ ಕರ್ತೃತ್ವ ಸಾಬೀತಾಗುವುದಿಲ್ಲ ಎಂದು ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅಾವರಿದ್ದ ಪೀಠ ನುಡಿಯಿತು.
"ಮೂಲ ಯಾರದ್ದು ಎಂಬ ವಿಷಯದಲ್ಲಿ ಡಾಗರ್ ವಂಶಸ್ಥರು ಸಾಬೀತು ಮಾಡಿದ್ದಾರೆ. ಆದರೆ ಕರ್ತೃತ್ವದ ವಿಷಯವನ್ನು ನ್ಯಾಯಾಲಯ ಪರಿಶೀಲಿಸಲಿದೆ. ಮೊದಲ ಪ್ರದರ್ಶನ ನೀಡಿದ ಮಾತ್ರಕ್ಕೆ ಕರ್ತೃತ್ವ ಡಾಗರ್ ಅವರದ್ದು ಎನಿಸಿಕೊಳ್ಳುವುದಿಲ್ಲ. ಮೇಲ್ಮನವಿದಾರರ ವಾದ ಮೊದಲ ಪ್ರದರ್ಶನದಿಂದಲೇ ಕರ್ತೃತ್ವವನ್ನು ಊಹಿಸಲಾಗಿದೆ ಎಂಬಂತಿದೆ. ಆದರೆ ಪ್ರತಿವಾದಿಗಳು ಖುಸ್ರೋ ಆವೃತ್ತಿ ಮುಂತಾದವುಗಳನ್ನು ಉಲ್ಲೇಖಿಸಿದ್ದಾರೆ. ಆದ್ದರಿಂದ, ದ್ರುಪದ ಸಂಗೀತವನ್ನು ಸುರ-ತಾಳದಲ್ಲಿ ಡಾಗರ್ ಪರಂಪರೆಯಲ್ಲಿ ಹಾಡುವ ಮೊದಲು ಈ ರಚನೆ ಇರಲಿಲ್ಲ ಎಂಬುದಕ್ಕೆ ಸ್ವತಂತ್ರ ಸಾಕ್ಷ್ಯ ನೀಡಬೇಕು,” ಎಂದು ನ್ಯಾಯಾಲಯ ಡಾಗರ್ ಕುಟುಂಬಸ್ಥರಿಗೆ ತಿಳಿಸಿತು.
ಡಾಗರ್‌ವಾನಿ ಸಂಪ್ರದಾಯದ ಕೊಡುಗೆಗೆ ಮನ್ನಣೆ ನೀಡುವ ಅಗತ್ಯವಿದೆ ಎಂದು ಪೀಠ ಹೇಳಿತು. “ಪ್ರತಿವಾದಿಯ ಪೂರ್ವಜರು ಡಾಗರ್‌ವಾನಿ ಪರಂಪರೆಯ ಭಾಗವಾಗಿದ್ದರು. ಈ ರಾಗದ ಮೂಲದ ಬಗ್ಗೆ ಶಂಕೆಗಳು ಉಳಿದಿಲ್ಲ. ಈ ಘರಾನೆಗಳು ಶಾಸ್ತ್ರೀಯ ಸಂಗೀತಕ್ಕೆ ಕೊಡುಗೆ ನೀಡದಿದ್ದರೆ, ಇಂದಿನ ಆಧುನಿಕ ಗಾಯಕರು ಯಶಸ್ವಿಯಾಗುತ್ತಿದ್ದರೆ?” ಎಂದು ರೆಹಮಾನ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪ್ರಶ್ನಿಸಿತು.
ಆಗ ಸಿಂಘ್ವಿ ಅವರು ಇದನ್ನು 1991ರಲ್ಲಿ ಗುಂಡೆಚಾ ಸಹೋದರರು ಸೇರಿದಂತೆ ಅನೇಕರು ಪ್ರದರ್ಶಿಸಿದ್ದಾರೆ; ಆಗ ಡಾಗರ್ ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಆದರೆ ರೆಹಮಾನ್ ಅವರ ಪ್ರದರ್ಶನದ ವೇಳೆ ಮಾತ್ರ ಅವರು ಆಕ್ಷೇಪಿಸಿದರು ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಬಾಗ್ಚಿ ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ಸ್ಮರಿಸಿ. ಅವರು ಶಾಸ್ತ್ರೀಯ ಸಂಗೀತದ ಪಾರಂಪರಿಕ ಆರಾಧಕರು. ಅವರು ಸ್ಪರ್ಧಾ ಕ್ಷೇತ್ರದಲ್ಲಿಲ್ಲ. ಅವರಿಗೆ ಬೇಕಿರುವುದು ಗೌರವ ಮತ್ತು ಮನ್ನಣೆ ಎಂದರು.
ಈ ಕುರಿತು ತಮ್ಮ ಕಕ್ಷಿದಾರ ರೆಹಮಾನ್ ಅವರಿಂದ ಸೂಚನೆಗಳನ್ನು ಪಡೆಯಲು ಸಿಂಘ್ವಿ ಸಮಯಾವಕಾಶ ಕೋರಿದರು. ನ್ಯಾಯಾಲಯ ಫೆಬ್ರವರಿ 20ಕ್ಕೆ ಪ್ರಕರಣ ಮುಂದೂಡಿತು.
ಅದರೊಂದಿಗೆ, ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ, ಮೊಕದ್ದಮೆ ತೀರ್ಮಾನವಾಗುವವರೆಗೆ ರೆಹಮಾನ್ ಅವರು ₹2 ಕೋಟಿ ಮೊತ್ತವನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಬಳಿ ಠೇವಣಿ ಇಡಬೇಕೆಂಬ ನಿರ್ದೇಶನ ಮುಂದುವರೆಯಲಿದೆ ಎಂದು ಪೀಠ ಸ್ಪಷ್ಟಪಡಿಸಿತು.
ತನ್ನ ತಂದೆ ನಾಸಿರ್ ಫೈಯಾಜುದ್ದೀನ್ ಡಾಗರ್ ಮತ್ತು ಚಿಕ್ಕಪ್ಪ ಜಹಿರುದ್ದೀನ್ ದಾಗರ್ ಸಂಯೋಜಿಸಿದ್ದ 'ಶಿವ ಸ್ತುತಿ' ಹಾಡಿನ ನಕಲು ಈ ಗೀತೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭಾರತೀಯ ಶಾಸ್ತ್ರೀಯ ಗಾಯಕ ಫೈಯಾಜ್ ವಾಸಿಫುದ್ದೀನ್ ದಾಗರ್ ಅವರು ಮೂಲ ಮೊಕದ್ದಮೆ ಹೂಡಿದ್ದರು.
ಆದರೆ ಇದಕ್ಕೆ ಆಕ್ಷೇಪಿಸಿದ್ದ ರೆಹಮಾನ್ ಅವರು ಶಿವಸ್ತುತಿ ದ್ರುಪದ ಪರಂಪರೆಯ ಸಾಂಪ್ರದಾಯಿಕ ಕೃತಿಯಾಗಿದ್ದು ಸಾರ್ವಜನಿಕವಾಗಿ ಲಭ್ಯವಿದೆ. ವೀರ ರಾಜ ವೀರ ಪಾಶ್ಚಾತ್ಯ ಸಂಗೀತದ ಪ್ರಭಾವದೊಡನೆ 227 ವಿಭಿನ್ನ ಪದರಗಳಲ್ಲಿ ರೂಪುಗೊಂಡ ಸ್ವತಂತ್ರ ಕೃತಿ ಎಂದು ವಾದಿಸಿದ್ದರು. ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.