

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡೂ ಜೊತೆಯಾಗಿ ಹೆಜ್ಜೆ ಹಾಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿತು [ಫಿರ್ದೋಸ್ ಕಂಬಾಟ್ಟಾ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].
ಗುಜರಾತ್‌ನ ಅಹಮದಾಬಾದ್‌ನಲ್ಲಿ ನದೀತೀರ ಅಭಿವೃದ್ಧಿ ಯೋಜನೆಯ ಎರಡನೇ ಹಂತಕ್ಕಾಗಿ ಭಾರೀ ಪ್ರಮಾಣದಲ್ಲಿ ಮರ ಕಡಿಯುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿ ಅಹಮದಾಬಾದ್‌ನ ಹನ್ಸೋಲ್ ಗ್ರಾಮದ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನ್ಯಾಯಮೂರ್ತಿಗಳಾದ ಆರ್ ಮಹಾದೇವನ್ ಹಾಗೂ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಮೇಲಿನಂತೆ ಅಭಿಪ್ರಾಯಪಟ್ಟಿತು.
ಕತ್ತರಿಸಲಾಗುವ ಮರಗಳು ಸಂರಕ್ಷಿತ ಮರಗಳ ವ್ಯಾಪ್ತಿಗೆ ಬಾರದ ಗಾಂಡೋ ಬಾವಲ್ ಜಾತಿಯ ಸ್ವಾಭಾವಿಕವಾಗಿ ಬೆಳೆಯುವ ಮರಗಳಾಗಿದ್ದು, ಅರಣ್ಯೇತರ ಭೂಮಿಯಲ್ಲಿ ಇವೆ ಎಂದು ಹೇಳಿದ್ದ ಪುಣೆಯ ರಾಷ್ಟ್ರೀಯ ಹಸಿರು ಪ್ರಾಧಿಕಾರವು ಮರಗಳನ್ನು ಕಡಿಯುವ ಪ್ರಕ್ರಿಯೆಯಲ್ಲಿ ಈ ಹಿಂದೆ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು.
ಬೆಳೆದು ನಿಂತ ಸುಮಾರು 4,000 ಮರಗಳನ್ನು ಸಂಪೂರ್ಣವಾಗಿ ಕಡಿದುಹಾಕಲಾಗಿದೆ ಇದರಿಂದ 50–60 ವರ್ಷಗಳಲ್ಲಿ ಬೆಳೆದಿದ್ದ ಅರಣ್ಯ ನಾಶವಾಗಿದೆ ಹಾಗೂ ನೀಲ್ಗಾಯ್ ಮುಂತಾದ ವನ್ಯಜೀವಿಗಳಿಗೆ ಹಾನಿಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಿಚಾರಣೆ ವೇಳೆ ಸುಪ್ರೀಂ ಕೊರ್ಟ್ ಪೀಠದ ಮುಂದೆ ವಾದಿಸಿದರು.
ಆದರೆ ಇಂತಹ ಸ್ವಾಭಾವಿಕ ಮರಗಳು ಕಾಲಕ್ರಮೇಣ ಪುನಃ ಬೆಳೆಯುತ್ತವೆ ಹಾಗೂ ಅಭಿವೃದ್ಧಿಯಿಂದ ಉಂಟಾಗುವ ಪರಿಸರ ನಷ್ಟವನ್ನು ಪರಿಹರಿಸಲು ಪರಿಹಾರಾತ್ಮಕ ಅರಣ್ಯೀಕರಣದ ಯಶಸ್ವಿ ಉದಾಹರಣೆಗಳು ದೇಶದಲ್ಲಿವೆ ಎಂದು ಪೀಠವು ಅಭಿಪ್ರಾಯಪಟ್ಟಿತು, ಹೆಲಿಪ್ಯಾಡ್ ಮುಂತಾದ ಮೂಲಸೌಕರ್ಯಗಳು ತುರ್ತು ಅಗತ್ಯವಾಗಿದ್ದು, ಈ ಪ್ರದೇಶ ಅಧಿಸೂಚಿತ ಅರಣ್ಯ ಕೂಡ ಅಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ಬದಲಿ ಸ್ಥಳದಲ್ಲಿ ಇದರ ಎರಡರಷ್ಟು ಮರಗಳನ್ನು ನೆಡುವ ಯೋಜನೆಗೆ ಮುಂದಾಗಿರುವುದನ್ನು ಗಮನಿಸಿದ ನ್ಯಾಯಾಲಯ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಜೊತೆಗೆ, ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಸೂಕ್ತ ಭೂಮಿ ಗುರುತಿಸಲು ಸಮಿತಿ ರಚಿಸುವಂತೆ ಎನ್‌ಜಿಟಿಗೆ ನಿರ್ದೇಶಿಸಿದ ಪೀಠವು ಅರ್ಜಿ ಇತ್ಯರ್ಥಪಡಿಸಿತು.