ದೆಹಲಿ ಹೈಕೋರ್ಟ್ ಹಿಂದಿನ ನ್ಯಾಯಮೂರ್ತಿ ಹಾಗೂ ಒಡಿಶಾ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಹೂಡಲಾಗಿರುವ ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಯಲ್ಲಿ ಪಾಲ್ಗೊಳ್ಳುವುದಾಗಿ ವಿಜ್ಞಾನಿ ಆನಂದ್ ರಂಗನಾಥನ್ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು.
ಈ ವಿಚಾರವನ್ನು ರಂಗನಾಥನ್ ಪರ ವಕೀಲರು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ವಿಭಾಗೀಯ ಪೀಠಕ್ಕೆ ವಿವರಿಸಿದರು. ತಾವು ಮಾಡಿದ ಟ್ವೀಟ್‌ಗಳಿಗೆ ರಂಗನಾಥನ್ ಅವರು ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿರುವುದಾಗಿ ಅಮಿಕಸ್ ಕ್ಯೂರಿ ಹಿರಿಯ ವಕೀಲ ಅರವಿಂದ್ ನಿಗಮ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.
"ಈ ಪ್ರಕ್ರಿಯೆಗಳ ನಂತರ, ರಂಗನಾಥನ್ ಅವರು ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ಅವರು ಎಂದಿಗೂ ಕ್ಷಮೆಯಾಚಿಸುವುದಿಲ್ಲ ಮತ್ತು ಹೋರಾಡುತ್ತಲೇ ಇತಿಹಾಸದಲ್ಲಿ ದಾಖಲಾಗುವುದಾಗಿ ಅವರು ಹೇಳಿದ್ದು, ಆ ನಂತರ ಅವರು ಮಾಡಿದ ಟ್ವೀಟ್‌ಗಳು ಸಹ ಅವಿಧೇಯತೆಯಿಂದ ಕೂಡಿವೆ" ಎಂದು ಅಮಿಕಸ್ ಹೇಳಿದರು.
ಆಗ ನ್ಯಾಯಾಲಯ “ಯಾಕೆ? ಅವರು ಏಕೆ ಹೋರಾಡುತ್ತಾರಂತೆ? ಇದೇನು ಅಂತರ್ಯುದ್ಧವಲ್ಲ” ಎಂದು ಬುದ್ಧಿಮಾತು ಹೇಳಿತು.
ದೆಹಲಿ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಗೌತಮ್ ನವಲಖಾ ಅವರಿಗೆ ನ್ಯಾ. ಮುರಳೀಧರ್ ಜಾಮೀನು ನೀಡಿದ್ದರು. ಹೀಗಾಗಿ ನ್ಯಾಯಮೂರ್ತಿಗಳ ಬಗ್ಗೆ ಟೀಕೆ ಮಾಡಿದ್ದ ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರ ವಿರುದ್ಧ ದೆಹಲಿ ಹೈಕೋರ್ಟ್ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿತ್ತು.
ಮತ್ತೆ ಅಗ್ನಿಹೋತ್ರಿಗೆ ಸೂಚನೆ
ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವವರಲ್ಲಿ ಚಿತ್ರ ನಿರ್ದೇಶಕ ವಿವೇಕ್ ಅಗ್ನಹೋತ್ರಿ ಕೂಡ ಒಬ್ಬರು. ನ್ಯಾ. ಮುರಳೀಧರ್ ಅವರದ್ದು ಪಕ್ಷಪಾತದ ತೀರ್ಪು ಎಂದು ಆರೋಪಿಸಿ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಗ್ನಿಹೋತ್ರಿ, ರಂಗನಾಥನ್, ಸ್ವರಾಜ್ಯ ನಿಯತಕಾಲಿಕೆ ಹಾಗೂ ಅದೇ ರೀತಿ ಟ್ವೀಟ್ ಮಾಡಿದ್ದ ಇನ್ನಿತರರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅಗ್ನಿಹೋತ್ರಿ, ರಂಗನಾಥನ್ ಮತ್ತು ಸ್ವರಾಜ್ಯ ಅವರು ತಮ್ಮ ಪರ ವಾದ ಮಂಡಿಸಲು ವಕೀಲರನ್ನು ನಿಯೋಜಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಏಕಪಕ್ಷೀಯ ವಿಚಾರಣೆ ಮುಂದುವರೆಸಲು ನಿರ್ಧರಿಸಿತ್ತು.
ಡಿಸೆಂಬರ್ 6, 2022 ರಂದು ನಡೆದ ವಿಚಾರಣೆ ವೇಳೆ ಅಗ್ನಿಹೋತ್ರಿ ತಮ್ಮ ಹೇಳಿಕೆಗಳಿಗಾಗಿ ಬೇಷರತ್ ಕ್ಷಮೆ ಯಾಚಿಸಿದ್ದರು. ಅಲ್ಲದೆ ತಮ್ಮ ಹೇಳಿಕೆ ಹಿಂಪಡೆಯುತ್ತಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದರು. ತಮ್ಮ ವಿರುದ್ಧ ಏಕಪಕ್ಷೀಯ ವಿಚಾರಣೆ ನಡೆಸದಂತೆ ವಿಚಾರಣೆಯಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರಿದ್ದರು. ಆದರೆ ಅಗ್ನಿಹೋತ್ರಿ ಅವರು ನ್ಯಾಯಾಲಯದಲ್ಲಿ ಖುದ್ದು ಹಾಜರರಿಬೇಕೆಂದು ಪೀಠ ಸೂಚಿಸಿತ್ತು.
ಇಂದಿನ ವಿಚಾರಣೆ ವೇಳೆ ಅಗ್ನಿಹೋತ್ರಿ ಪರ ವಕೀಲರು ತಮ್ಮ ಕಕ್ಷಿದಾರರ ಆರೋಗ್ಯ ಸರಿ ಇಲ್ಲ ಹೀಗಾಗಿ ಖುದ್ದು ಹಾಜರಾಗುವ ಬದಲು ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದಿತು. ಆದರೆ ನ್ಯಾಯಾಲಯ ಖುದ್ದು ಹಾಜರಾಗುವಂತೆ ಮತ್ತೆ ತಾಕೀತು ಮಾಡಿತು.
ಸೂಚನೆಗಳನ್ನು ಪಡೆದ ವಕೀಲರು ಏಪ್ರಿಲ್ 10ರಂದು ಅಗ್ನಿಹೋತ್ರಿ ನ್ಯಾಯಾಲಯಕ್ಕೆ ಬರಲಿದ್ದಾರೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಲಯ ಅದೇ ದಿನಕ್ಕೆ ಮುಂದೂಡಿತು.
ಮತ್ತೊಂದು ನ್ಯಾಯಾಂಗ ನಿಂದನೆ ಪ್ರಕರಣ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪರ ನಿಲುವು ಹೊಂದಿರುವ ಪತ್ರಕರ್ತ ಎಸ್ ಗುರುಮೂರ್ತಿ ಪ್ರತಿವಾದಿಯಾಗಿರುವ ದೆಹಲಿ ಹೈಕೋರ್ಟ್ ವಕೀಲರ ಸಂಘ (ಡಿಎಚ್‌ಸಿಬಿಎ) ಸಲ್ಲಿಸಿರುವ ಮತ್ತೊಂದು ನ್ಯಾಯಾಂಗ ನಿಂದನೆ ಅರ್ಜಿ ಬಗ್ಗೆಯೂ ನ್ಯಾಯಾಲಯಕ್ಕೆ ಇಂದು ಮಾಹಿತಿ ನೀಡಲಾಯಿತು.
ಆದರೆ ಗುರುಮೂರ್ತಿ ಈಗಾಗಲೇ ತಮ್ಮ ಟ್ವೀಟ್ ತೆಗೆದುಹಾಕಿದ್ದು ನ್ಯಾಯಾಲಯ ಅವರೊಂದಿಗೆ ಮಾತುಕತೆ ನಡೆಸಿರುವುದನ್ನು ಪೀಠವು ಗಮನಿಸಿತು. ಆಗ ನ್ಯಾ ಮೃದಲ್ ಅವರು, ʼಈ ಪ್ರಕರಣ ಐದು ವರ್ಷಗಳಿಂದ ನಡೆಯತ್ತಿದ್ದು ಇದಕ್ಕೆ ಇತಿಶ್ರೀ ಹಾಡೋಣʼ ಎಂದು ಹೇಳಿದರು. ಏಪ್ರಿಲ್ 10ರಂದು ನಡೆಯುವ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರಣೆ ವೇಳೆಯೇ ಈ ಅರ್ಜಿಯನ್ನೂ ನ್ಯಾಯಾಲಯ ಪರಿಗಣಿಸಲಿದೆ.