ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳಗಳು (ಸಿಬಿಐ) ಮುಕ್ತವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಲಿದೆ ಎಂದು ಗುರುವಾರ ಬಾಂಬೆ ಹೈಕೋರ್ಟ್ ಹೇಳಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಜಾರಿ ನಿರ್ದೇಶನಾಲಯ ಮಾಹಿತಿ ವರದಿ (ಇಸಿಐಆರ್) ಆಧರಿಸಿ ಸಮನ್ಸ್ ವಜಾಗೊಳಿಸುವಂತೆ ಕೋರಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಏಕನಾಥ್ ಖಡ್ಸೆ ಅವರು ಸಲ್ಲಿಸಿದ್ದ ಮನವಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಷ್ ಪಿಟಾಳೆ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿಯು ವಿಚಾರಣೆಗೆ ಬಾಕಿ ಇರುವಾಗ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಖಡ್ಸೆ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅಬಾದ್ ಪಾಂಡಾ ಮಧ್ಯಂತರ ತಡೆಯಾಜ್ಞೆ ಕೋರಿದರು. ಆಗ ಮಧ್ಯಪ್ರವೇಶಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಜನವರಿ 25ರ ವರೆಗೆ ಜಾರಿ ನಿರ್ದೇಶನಾಲಯವು ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮ ಕೈಗೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದೇ ಸಂದರ್ಭ ವಿಚಾರಣೆ ಮುಂದೂಡಿದ ಪೀಠವು ಖಡ್ಸೆ ಅವರಿಗೆ ನೀಡಲಾಗಿರುವ ರಕ್ಷಣೆಯನ್ನು ಸೋಮವಾರದ ನಂತರಕ್ಕೂ ಏಕೆ ವಿಸ್ತರಿಸಲಾಗದು ಎಂದು ಜಾರಿ ನಿರ್ದೇಶನಾಲಯಕ್ಕೆ ಕೇಳಿತು.
“ಅರ್ಜಿದಾರರಿಗೆ ಕೆಲವು ದಿನಗಳ ರಕ್ಷಣೆ ನೀಡಿದರೆ ಸ್ವರ್ಗಲೋಕ ಧರೆಗುರುಳುವುದೇ. ರಕ್ಷಣೆ ನೀಡಬಾರದು ಎಂದು ಒತ್ತಿಹೇಳುತ್ತಿರುವುದೇಕೆ?” ಎಂದು ಪೀಠ ಪ್ರಶ್ನಿಸಿತು.
ಖಡ್ಸೆ ಅವರು ಜಾರಿ ನಿರ್ದೇಶನಾಲಯದೊಂದಿಗೆ ತನಿಖೆಗೆ ಸಹರಿಸುತ್ತಿದ್ದಾರೆ ಎಂಬುದನ್ನು ಪರಿಗಣಿಸಿದ ಪೀಠವು ಮೇಲಿನ ಪ್ರಶ್ನೆ ಹಾಕಿತು. ತನಿಖೆ ಸಹಕರಿಸುತ್ತಿರುವಾಗ ಮತ್ತು ಸಮನ್ಸ್‌ಗೆ ಗೌರವ ನೀಡುತ್ತಿರುವ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಬೇಕು ಎಂದು ಬಯಸುತ್ತಿರುವುದೇಕೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಮನವಿ ಏಕೆ ಅಕಾಲಿಕ ಮತ್ತು ಅದನ್ನು ಏಕೆ ವಜಾಗೊಳಿಸಬೇಕು ಎಂಬುದನ್ನು ಮುಂದಿನ ವಿಚಾರಣೆಯ ಸಂದರ್ಭದಲ್ಲಿ ವಿವರಿಸುವುದಾಗಿ ಸಿಂಗ್ ಹೇಳಿದ್ದಾರೆ. ಜನವರಿ 25ಕ್ಕೆ ವಿಚಾರಣೆ ಮುಂದೂಡಲಾಗಿದೆ.