ತಿರುಪತಿ ಲಡ್ಡು ವಿವಾದ: ಇನ್ನೂ ಖಚಿತ ಪುರಾವೆ ದೊರೆತಿಲ್ಲ ಎಂದ ಸುಪ್ರೀಂ; ನಾಯ್ಡುಗೆ ಚಾಟಿ ಬೀಸಿದ ಪೀಠ

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಇದ್ದ ಗುಣಮಟ್ಟವಿಲ್ಲದ ತುಪ್ಪ ಬಳಸಲಾಗಿತ್ತು ಎಂದು ಆಂಧ್ರ ಮುಖ್ಯಮಂತ್ರಿ ನಾಯ್ಡು ಈಚೆಗೆ ದೂರಿದ್ದರು.
Tirupati temple
Tirupati temple
Published on

ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡು ತಯಾರಿಸಲು ಹಿಂದಿನ ಯುವಜನ ಶ್ರಮಿಕ ರೈತ (ವೈಎಸ್‌ಆರ್) ಕಾಂಗ್ರೆಸ್ ಪಕ್ಷ  ಪ್ರಾಣಿಗಳ ಕೊಬ್ಬು ಇರುವ ಗುಣಮಟ್ಟವಿಲ್ಲದ ತುಪ್ಪವನ್ನು ಬಳಸಿತ್ತು ಎಂದು ತರಾತುರಿಯಲ್ಲಿ ಸಾರ್ವಜನಿಕವಾಗಿ ದೂರಿದ್ದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಅಂತಹ ಆರೋಪ ರುಜುವಾತುಪಡಿಸಲು ಇನ್ನೂ ಯಾವುದೇ ನಿರ್ಣಯಕ ಪುರಾವೆಗಳು ದೊರೆತಿಲ್ಲ ಎಂದಿರುವ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದ್ದರೂ ಸಾರ್ವಜನಿಕವಾಗಿ ಹೇಳಿಕೆನೀಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿತು.

Also Read
ತಿರುಪತಿ ಲಡ್ಡು ವಿವಾದ: ಸುಪ್ರೀಂ ಕೋರ್ಟ್‌ಗೆ ಸುಬ್ರಮಣಿಯನ್ ಸ್ವಾಮಿ ಹಾಗೂ ವೈಎಸ್‌ಆರ್‌ಸಿ ಸಂಸದ ಪ್ರತ್ಯೇಕ ಅರ್ಜಿ

ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಇರುವ ತುಪ್ಪ ಬಳಸಲಾಗಿದೆ ಎಂಬ ಖಚಿತ ತೀರ್ಮಾನಕ್ಕೆ ಬರಲು ನಾಯ್ಡು ಅವರ ಬಳಿ ಯಾವುದಾದರೂ ಸಾಕ್ಷ್ಯ ಇದೆಯೇ ಎಂದು ನ್ಯಾ. ಗವಾಯಿ ಪ್ರಶ್ನಿಸಿದರು.

ಇದೇ ವೇಳೆ ವರದಿಗಳ ಪ್ರಕಾರ ತುಪ್ಪದ ಮಾದರಿ ತಿರಸ್ಕರಿಸಲಾಗಿದೆ ಎಂಬುದನ್ನು ಗಮನಿಸಿದ ನ್ಯಾ. ವಿಶ್ವನಾಥನ್‌ " ಹಾಗಾದರೆ, ನೀವೇ ತನಿಖೆಗೆ ಆದೇಶಿಸಿ, ಪತ್ರಿಕೆಗಳಲ್ಲಿ ಈ ವಿಚಾರ ಪ್ರಸ್ತಾಪಿಸುವ ಅಗತ್ಯ ಏನಿತ್ತು? " ಎಂದು ಕೇಳಿದರು.

ಕನಿಷ್ಠ ದೇವರುಗಳನ್ನಾದರೂ ರಾಜಕೀಯದಿಂದ ದೂರ ಇಡಬೇಕು” ಎಂದು ನ್ಯಾಯಾಲಯ ಕುಟುಕಿತು.

ಲಡ್ಡುಗಳನ್ನು ಪರೀಕ್ಷೆಗೆ ಕಳಿಸಲಾಗಿದೆಯೇ ಎಂದು ಪ್ರಶ್ನಿಸಿದ ನ್ಯಾಯಪೀಠ ಸಾರ್ವಜನಿಕವಾಗಿ ಆರೋಪ ಮಾಡುವ ಮುನ್ನ ಪರೀಕ್ಷಿಸುವುದು ಹೆಚ್ಚು ಸೂಕ್ತವಿತ್ತು ಅಲ್ಲವೇ ಎಂದು ಕೇಳಿತು. ಲಡ್ಡು ತಯಾರಿಕೆಯಲ್ಲಿ ಆಕ್ಷೇಪಾರ್ಹ ತುಪ್ಪ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಮೇಲ್ನೋಟದ ಸಾಕ್ಷ್ಯಗಳಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

“ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಬೇಕಿತ್ತೇ? ಎಸ್‌ಐಟಿಗೆ ಆದೇಶ ನೀಡಿರುವಾಗ ಮಾಧ್ಯಮಗಳೆದುರು ಬಹಿರಂಗ ಹೇಳಿಕೆ ನೀಡುವ ಅಗತ್ಯವೇನಿತ್ತು? ಮೇಲ್ನೋಟಕ್ಕೆ ಸಾಬೀತಾಗುವಂತದ್ದು ಏನೂ ಇಲ್ಲ. ಅದೇ ತುಪ್ಪ ಬಳಸಲಾಗಿತ್ತು ಎಂಬ ಆರೋಪ ದೃಢೀಕರಿಸುವಂತಹ ಯಾವುದೇ ಗಟ್ಟಿ ಪುರಾವೆ ಇಲ್ಲ. ಅಂತಹ ಹೇಳಿಕೆಗಳನ್ನು ಜವಾಬ್ದಾರಿಯುತ ಸಾರ್ವಜನಿಕ ಸೇವೆಯಲ್ಲಿರುವವರು ನೀಡಿದಾಗ ಅದು ಎಸ್‌ಐಟಿ ಮೇಲೆ ಯಾವ ಪರಿಣಾಮ ಬೀರುತ್ತದೆ?” ಎಂದು ನ್ಯಾಯಾಲಯ ಕಿಡಿಕಾರಿತು.

 ಎಫ್‌ಐಆರ್ ದಾಖಲಿಸುವ ಮೊದಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಮುನ್ನವೇ ಸಿಎಂ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅಂತೆಯೇ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿಗೆ ತನಿಖೆ ಮುಂದುವರಿಸಲು ಅವಕಾಶ ನೀಡಬೇಕೇ ಅಥವಾ ತನಿಖೆಯನ್ನು ಬೇರೆ ಸಂಸ್ಥೆಗೆ ವರ್ಗಾಯಿಸಬೇಕೇ ಎಂದು ತಿಳಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಾಲಯ ಕೇಳಿದೆ. ಅಕ್ಟೋಬರ್ 3 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ವಾದ ಮಂಡಿಸಿದರು.

ಆರೋಪಗಳ ತನಿಖೆ ಕೋರಿ ಮಾಜಿ ಸಂಸದ ಡಾ ಸುಬ್ರಮಣಿಯನ್ ಸ್ವಾಮಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ತಿರುಮಲ ತಿರುಪತಿ ದೇವಸ್ಥಾನಂನ ಮಾಜಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ , ಇತಿಹಾಸಕಾರ ವಿಕ್ರಮ್ ಸಂಪತ್ ಅವರೊಂದಿಗೆ ವೈದಿಕ ವಾಗ್ಮಿ ದುಷ್ಯಂತ್ ಶ್ರೀಧರ್ ಹಾಗೂ ಸುದರ್ಶನ ಸುದ್ದಿ ನಿರೂಪಕ ಸುರೇಶ್ ಚವ್ಹಾಣ್ಕೆ  ಸೇರಿದಂತೆ ನಾಲ್ಕು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಸುಬ್ರಮಣಿಯನ್‌ ಸ್ವಾಮಿ ಅವರ ಪರವಾಗಿ ಹಿರಿಯ ವಕೀಲ ರಾಜಶೇಖರ ರಾವ್‌ ಇಂದು ವಾದ ಆರಂಭಿಸಿದರು. ಸ್ವಾಮಿ ಅವರ ತಕರಾರುಗಳಿಗೆ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಆಕ್ಷೇಪ ವ್ಯಕ್ತಪಡಿಸಿದರು. ಸಂಪತ್ ಮತ್ತು ಶ್ರೀಧರ್ ಪರವಾಗಿ ವಕೀಲ ರಾಘವ್ ಅವಸ್ತಿ ವಾದ ಮಂಡಿಸಿದರು. ಚವ್ಹಾಣ್ಕೆ ಅವರನ್ನು ಹಿರಿಯ ವಕೀಲೆ ಸೋನಿಯಾ ಮಾಥುರ್ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com