ತಿರುಪತಿ ಲಡ್ಡು ವಿವಾದ: ಸುಪ್ರೀಂ ಕೋರ್ಟ್‌ಗೆ ಸುಬ್ರಮಣಿಯನ್ ಸ್ವಾಮಿ ಹಾಗೂ ವೈಎಸ್‌ಆರ್‌ಸಿ ಸಂಸದ ಪ್ರತ್ಯೇಕ ಅರ್ಜಿ

ಮಾಧ್ಯಮ ವರದಿಗಳ ಪ್ರಕಾರ, ತಿರುಪತಿ ದೇಗುಲದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳಿತ್ತು.
Tirupati temple
Tirupati temple
Published on

ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ.

ಒಂದು ಅರ್ಜಿಯನ್ನು ಬಿಜೆಪಿ ಹಿರಿಯ ಮುಖಂಡ ಡಾ. ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿದ್ದರೆ ಮತ್ತೊಂದು ಅರ್ಜಿಯನ್ನು ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ಮತ್ತು ತಿರುಮಲ ತಿರುಪತಿ ದೇವಸ್ಥಾನಂನ ಮಾಜಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಸಲ್ಲಿಸಿದ್ದಾರೆ.

Also Read
[ಶಬರಿಮಲೆ ಹಲಾಲ್ ಬೆಲ್ಲ ವಿವಾದ] ಹಲಾಲ್ ಅರ್ಥ ಏನೆಂದು ಅರ್ಜಿದಾರರನ್ನು ಪ್ರಶ್ನಿಸಿದ ಕೇರಳ ಹೈಕೋರ್ಟ್

ವರದಿಗಳ ಪ್ರಕಾರ, ತಿರುಪತಿ ದೇಗುಲದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳಿತ್ತು.

ಲಡ್ಡುಗಳನ್ನು ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳ ತನಿಖೆ ನಡೆಸಲು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸ್ವಾಮಿ ಅವರು ಕೋರಿದ್ದಾರೆ.

"ದೇಗುಲ ಪ್ರಸಾದ ತಯಾರಿಕೆಗೆ ಹೋಗುವ ವಿವಿಧ ಪದಾರ್ಥಗಳನ್ನು ಸರಬರಾಜು ಮಾಡುವ ಸಂಸ್ಥೆಗಳ ಗುಣಮಟ್ಟದ ಮೇಲ್ವಿಚಾರಣೆ ಮಾಡಲು ಆಂತರಿಕವಾಗಿ ತಪಾಸಣೆ ಮತ್ತು ಸಮತೋಲನ ಕಾಯ್ದುಕೊಳ್ಳುವ ವಿಧಾನ ಅಸ್ತಿತ್ವದಲ್ಲಿರಬೇಕಿತ್ತು " ಎಂದು ಅವರ ಮನವಿಯಲ್ಲಿ ಹೇಳಲಾಗಿದೆ.

ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದ ಮೂಲ ಮತ್ತು ಮಾದರಿಯ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲು ಆಂಧ್ರ ಪ್ರದೇಶ ರಾಜ್ಯಕ್ಕೆ ನಿರ್ದೇಶನಗಳನ್ನು ನೀಡುವಂತೆ ಅವರು ಕೋರಿದ್ದಾರೆ.

Also Read
ಅರವಿಂದ್ ಕೇಜ್ರಿವಾಲ್ ಮಾವು, ಸಿಹಿ ತಿನಿಸು ಸ್ವೀಕರಿಸಿದ್ದು ಏಕೆ? ದೆಹಲಿ ಹೈಕೋರ್ಟ್ ಪ್ರಶ್ನೆ

ಇತ್ತ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಅಥವಾ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಬೇಕು ಎಂದು ರಾಜ್ಯಸಭಾ ಸದಸ್ಯರಾಗಿರುವ ರೆಡ್ಡಿ ಮನವಿ ಮಾಡಿದ್ದಾರೆ.

ವೆಂಕಟೇಶ್ವರನ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿರುವುದರಿಂದ ವಿಚಾರಣೆ ಪೂರ್ಣಗೊಳ್ಳುವವರೆಗೆ ಪ್ರಕರಣಕ್ಕೆ ಪ್ರಚಾರ ನೀಡದಂತೆ ಕೇಂದ್ರ, ಆಂಧ್ರಪ್ರದೇಶ ಸರ್ಕಾರ, ಟಿಟಿಡಿ ಹಾಗೂ ಆಂಧ್ರ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರಿಗೆ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.

Kannada Bar & Bench
kannada.barandbench.com