ಸದನದಲ್ಲಿ ಪ್ರಶ್ನೆ ಕೇಳಲು ಹಣ ಹಾಗೂ ಉಡುಗೊರೆ ಪಡೆದಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ದೆಹಲಿ ಹೈಕೋರ್ಟ್‌ನಲ್ಲಿ ಮಂಗಳವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಶುಕ್ರವಾರ (ಅಕ್ಟೋಬರ್ 20) ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಸಂಸತ್ನಲ್ಲಿ ಪ್ರಶ್ನೆ ಕೇಳಲು ನಗದು ಹಾಗೂ ಉಡುಗೊರೆಗಳನ್ನು ಮಹುವಾ ಪಡೆದಿದ್ದಾರೆ ಎಂದು ದುಬೆ ಮತ್ತು ದೆಹದ್ರಾಯ್ ಆರೋಪಿಸಿದ್ದರು. ಈ ಸಂಬಂಧ ದುಬೆ ಭಾನುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಹಿರಾನಂದಾನಿ ಪ್ರತಿಸ್ಪರ್ಧಿಯಾಗಿರುವ ಅದಾನಿ ಸಮೂಹವನ್ನು ಗುರಿಯಾಗಿಸಿ ಅವರು ಕೆಲ ಪ್ರಶ್ನೆಗಳನ್ನು ಕೇಳಿದ್ದರು ಎಂದು ದೂರಲಾಗಿತ್ತು.
ಮೊಯಿತ್ರಾ ಅವರು ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ ಎಂಬುದಕ್ಕೆ ಖಚಿತ ದಾಖಲೆಗಳಿವೆ ಎಂದು ವಕೀಲ ದೆಹದ್ರಾಯ್ ಅವರು ಸಿಬಿಐಗೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಲೋಕಸಭಾಧ್ಯಕ್ಷರಿಗೆ ದುಬೆ ಪತ್ರ ಬರೆದಿದ್ದರು. ಮೊಯಿತ್ರಾ ಅವರು ಕೇಳಿದ 61 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳು ಹಿರಾನಂದಾನಿ ಪರವಾಗಿಯೇ ಇದ್ದವು ಎಂದು ಆರೋಪಿಸಲಾಗಿತ್ತು. ಇದಕ್ಕಾಗಿ ಮಹುವಾ ಅವರು ತಮ್ಮ ಲೋಕಸಭೆಯ ಆನ್‌ಲೈನ್ ಖಾತೆಯ ವಿವರಗಳನ್ನು ಹಿರಾನಂದಾನಿ ಅವರಿಗೆ ನೀಡಿದ್ದರು. ಈ ಖಾತೆಯನ್ನು ಬಳಸಿ ಹೀರಾನಂದಾನಿ ತಮಗೆ ಬೇಕಿರುವ ಪ್ರಶ್ನೆಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ಸಿಬಿಐಗೆ ನೀಡಿರುವ ದೂರಿನಲ್ಲಿ ದೆಹದ್ರಾಯ್ ಆರೋಪಿಸಿದ್ದರು.
ಆರೋಪ ಪ್ರಶ್ನಿಸಿ ದುಬೆ, ದೆಹದ್ರಾಯ್ ಹಾಗೂ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಮೊಯಿತ್ರಾ ಈಗಾಗಲೇ ಲೀಗಲ್ ನೋಟಿಸ್ ಕಳಿಸಿದ್ದಾರೆ. ತನ್ನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಮತ್ತು ರಾಜಕೀಯ ಲಾಭಕ್ಕಾಗಿ ಹಾಗೂ ವೈಯಕ್ತಿಕ ದ್ವೇಷ ಸಾಧಿಸಲು ಈ ಸಂಚು ರೂಪಿಸಲಾಗಿದೆ ಎಂದು ಮೊಯಿತ್ರಾ ಹೇಳಿದ್ದರು.