ಶಾಸಕರ ಶಿಫಾರಸ್ಸಿನ ಮೇರೆಗೆ ಸರ್ಕಾರವು ಅಧಿಕಾರಿಗಳ ವರ್ಗಾವಣೆ ಮಾಡುವುದು ತಪ್ಪಲ್ಲ: ಹೈಕೋರ್ಟ್

ಕೋಲಾರ ಜಿಲ್ಲೆಯ ಬಂಗಾರಪೇಟೆ ಗ್ರೇಡ್ -1 ತಹಶೀಲ್ದಾರ್ ವೆಂಕಟೇಶಪ್ಪ ತಮ್ಮನ್ನು ಅವಧಿಪೂರ್ವ ವರ್ಗಾವಣೆ ಮಾಡಿದ್ದ ಕ್ರಮ ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
Justices SG Pandit & KV Aravind
Justices SG Pandit & KV Aravind
Published on

ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಆರೋಪ ಹೊತ್ತ ಸರ್ಕಾರಿ ಅಧಿಕಾರಿಗಳನ್ನು ಸ್ಥಳೀಯ ಶಾಸಕರ ಸಲಹೆ, ಶಿಫಾರಸ್ಸಿನ ಮೇರೆಗೆ ವರ್ಗಾವಣೆ ಮಾಡುವುದು ತಪ್ಪಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ಗ್ರೇಡ್ -1 ತಹಶೀಲ್ದಾರ್ ವೆಂಕಟೇಶಪ್ಪ ಅವರು ತಮ್ಮನ್ನು ಅವಧಿಪೂರ್ವ ವರ್ಗಾವಣೆ ಮಾಡಿದ್ದ ಕ್ರಮ ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.

“ಅವಧಿಪೂರ್ವ ವರ್ಗಾವಣೆ ಮಾಡಿದ್ದರೂ ಅವರ ವಿರುದ್ಧ ಕಚೇರಿಗೆ ಸಮಯಕ್ಕೆ ಸರಿಯಾಗಿ ಬಾರದಿರುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿರುವ ಕಾರಣದಿಂದ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದರು. ಈ ದೂರಿನ ಭಾಗವಾಗಿ ತಹಶೀಲ್ದಾರ್‌ ವೆಂಕಟೇಶಪ್ಪ ಅವರನ್ನು ವರ್ಗಾವಣೆ ಮಾಡುವಂತೆ ಸ್ಥಳೀಯ ಶಾಸಕರು ಕಂದಾಯ ಸಚಿವರಿಗೆ ಮನವಿ ಮಾಡಿದ್ದರು. ಈ ವರ್ಗಾವಣೆಯನ್ನು ಕೆಎಟಿ ಎತ್ತಿಹಿಡಿದಿದೆ. ಈ ಆದೇಶದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮತ್ತು ದೋಷವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ 2024ರ ಮಾರ್ಗಸೂಚಿ ಪ್ರಕಾರ ವಿಶೇಷ ಅಥವಾ ಅಸಾಮಾನ್ಯ ಕಾರಣಗಳಿಂದ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ವರ್ಗಾವಣೆ ಮಾಡುವುದಕ್ಕೆ ಅವಕಾಶವಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ಅನುಮತಿ ಪಡೆದ ಬಳಿಕವೇ ವರ್ಗಾವಣೆ ಮಾಡಲಾಗಿದೆ” ಎಂದು ದಾಖಲೆಗಳು ಹೇಳುತ್ತವೆ ಎಂದು ಪೀಠ ಹೇಳಿದೆ.

“ಹಾಲಿ ವರ್ಗಾವಣೆ ಪ್ರಕರಣದಲ್ಲಿ ದುರುದ್ದೇಶಪೂರಿತ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ. ಅರ್ಜಿದಾರರು ವರ್ಗಾವಣೆಗೆ ಹೊಣೆಗಾರರಾಗಿದ್ದು, ಅವರನ್ನು ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ. ಆದ್ದರಿಂದ, ಅವರಿಗೆ ಯಾವುದೇ ತೊಂದರೆಯಾಗಿಲ್ಲ” ಎಂದು ಪೀಠ ತಿಳಿಸಿದೆ.

ಅರ್ಜಿದಾರರ ಪರ ವಕೀಲ ಜಯಂತ್‌ ದೇವ್‌ ಕುಮಾರ್‌ ಅವರು “2024ರ ಜುಲೈ 31ರಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಶೀಲ್ದಾರ್ ಕಚೇರಿಯಲ್ಲಿ ಗ್ರೇಡ್ -1 ತಹಶೀಲ್ದಾರ್ ಆಗಿ ವೆಂಕಟೇಶಪ್ಪ ಸೇವೆ ಸಲ್ಲಿಸಿದ್ದರು. 2024ರ ಡಿಸೆಂಬರ್ 31ರಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ನಿಗದಿತ ಅವಧಿಗೂ ಮುನ್ನ ವರ್ಗಾವಣೆ ಮಾಡಲಾಗಿತ್ತು. 2024ರ ಜೂನ್ 25ರ ವರ್ಗಾವಣೆ ಮಾರ್ಗಸೂಚಿ ಪ್ರಕಾರ ಯಾವುದೇ ಅಧಿಕಾರಿಯನ್ನು ಎರಡು ವರ್ಷಗಳಿಗೂ ಮುನ್ನ ವರ್ಗಾವಣೆ ಮಾಡಬಾರದು ಎಂದು ಹೇಳಲಾಗಿದೆ. ಆದರೆ, ಇಲ್ಲಿ ಅಧಿಕಾರ ಸ್ವೀಕರಿಸಿದ ಆರು ತಿಂಗಳಿಗೂ ಮುನ್ನ ವರ್ಗಾವಣೆ ಮಾಡಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಈ ವರ್ಗಾವಣೆ ಶಾಸಕರ ಮನವಿಯೆ ಮೇರೆಗೆ ನಡೆದಿದ್ದು, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎನ್ನಲಾಗದು. ಆದ್ದರಿಂದ, ವರ್ಗಾವಣೆ ಆದೇಶ ರದ್ದಪಡಿಸಬೇಕು” ಎಂದು ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ರೊಬೆನ್ ಜಾಕಬ್‌ ಅವರು “ಅರ್ಜಿದಾರ ತಹಶೀಲ್ದಾರ್‌ ಸಾರ್ವಜನಿಕರ ಸಮಸ್ಯೆಗಳನ್ನು ಸರಿಯಾಗಿ ಆಲಿಸುತ್ತಿರಲಿಲ್ಲ. ಆದಕಾರಣ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ಆದೇಶವನ್ನು ಮುಖ್ಯಮಂತ್ರಿ ಅನುಮೋದಿಸಿದ್ದಾರೆ. ಆದ್ದರಿಂದ, ವರ್ಗಾವಣೆ ಆದೇಶದಲ್ಲಿ ಯಾವುದೇ ದೋಷ ಇಲ್ಲ. ಅರ್ಜಿ ವಜಾಗೊಳಿಸಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: 2024ರ ಜುಲೈ 31ರಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿದಾರರು ಗ್ರೇಡ್ -1 ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅರ್ಜಿದಾರರ ವಿರುದ್ಧ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದಿರುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ಕ್ಷೇತ್ರದ ಶಾಸಕರು, ಕಂದಾಯ ಸಚಿವರಿಗೆ ಪತ್ರ ಬರೆದಿದ್ದರು. ಆ ಮೂಲಕ ಅರ್ಜಿದಾರರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಮತ್ತೊಬ್ಬ ಅಧಿಕಾರಿಯನ್ನು ನಿಯೋಜನೆ ಮಾಡುವಂತೆ ಕೋರಿದ್ದರು. ಅದರಂತೆ ಅರ್ಜಿದಾರರನ್ನು 2024ರ ಡಿಸೆಂಬರ್ 13ರಂದು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ ವರ್ಗಾವಣೆ ಆದೇಶವನ್ನು ಎತ್ತಿಹಿಡಿದು, ಅರ್ಜಿಯನ್ನು ವಜಾಗಿಳಿಸಿತ್ತು.

Attachment
PDF
Venkateshappa Vs State of Karnataka
Preview
Kannada Bar & Bench
kannada.barandbench.com