ಎನ್‌ಟಿಎಂ ಕನ್ನಡ ಶಾಲೆ ಪ್ರಕರಣ: ಶಾಲೆ ವರ್ಗಾವಣೆಯಿಂದ ಮೂಲಭೂತ ಹಕ್ಕು ಉಲ್ಲಂಘನೆ ಎಂಬ ವಾದ ಒಪ್ಪಲಾಗದು ಎಂದ ಹೈಕೋರ್ಟ್‌

ಕಳೆದ ವರ್ಷದ ನವೆಂಬರ್‌ 19ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2013ರ ಆದೇಶ ಜಾರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಇದನ್ನು ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಎನ್‌ಟಿಎಂ ಕನ್ನಡ ಶಾಲೆ ಪ್ರಕರಣ: ಶಾಲೆ ವರ್ಗಾವಣೆಯಿಂದ ಮೂಲಭೂತ ಹಕ್ಕು ಉಲ್ಲಂಘನೆ ಎಂಬ ವಾದ ಒಪ್ಪಲಾಗದು ಎಂದ ಹೈಕೋರ್ಟ್‌
Karnataka HC and Students

“ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ. ಶಾಲೆಯ ವರ್ಗಾವಣೆಯಿಂದ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ ಎಂಬ ಅರ್ಜಿದಾರರ ವಾದ ಒಪ್ಪಲಾಗದು” ಎಂದಿರುವ ಕರ್ನಾಟಕ ಹೈಕೋರ್ಟ್‌ ಮೈಸೂರು ನಗರದ ಎನ್‌ಟಿಎಂ ಕನ್ನಡ ಶಾಲೆಯ ವರ್ಗಾವಣೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಜಾ ಮಾಡಿತು.

ವಿದ್ಯಾರ್ಥಿನಿ ಅನುಷಾ ಒಳಗೊಂಡು ಶಾಲೆಯ 22 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ನೇತೃತ್ವದ ಏಕಸದಸ್ಯ ಪೀಠ ಪ್ರಕಟಿಸಿತು.

ಎನ್‌ಟಿಎಂ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಲು 2013ರ ಜನವರಿ 9ರಂದು ಹೊರಡಿಸಿರುವ ಆದೇಶವನ್ನು ಜಾರಿಗೆ ತರುವಂತೆ ಮೈಸೂರು ಜಿಲ್ಲಾಧಿಕಾರಿಗೆ ಸೂಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2020ರ ನವೆಂಬರ್‌ 19ರಂದು ಪತ್ರ ಬರೆದಿದ್ದರು. ಇದನ್ನು ಪ್ರಶ್ನಿಸಿದ್ದ ವಿದ್ಯಾರ್ಥಿಗಳು, ಶಾಲೆ ವರ್ಗಾವಣೆಯಿಂದ ಶಿಕ್ಷಣ ಪಡೆಯುವ ತಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ. ಆದ್ದರಿಂದ, ವರ್ಗಾವಣೆ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2013ರ ಜನವರಿ 9ರ ಆದೇಶವನ್ನು ಆಧರಿಸಿ ಮೈಸೂರು ಡಿಸಿಗೆ 2020ರ ನವೆಂಬರ್‌ 19ರಂದು ಪತ್ರ ಬರೆದಿದ್ದರು. ಆದರೆ, 2013ರ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ಈಗಾಗಲೇ ವಜಾಗೊಳಿಸಿದೆ. ಅಲ್ಲದೆ, ಶಾಲೆಯ ಸ್ಥಳಾಂತರದಿಂದ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು. ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವುದು ಮೂಲಭೂತ ಹಕ್ಕು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.

Also Read
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ʼಲಕ್ಷ್ಮಿʼ ಆನೆ ವಶಕ್ಕೆ ಪಡೆಯಲು ಮನವಿ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಸ್ವಾಮಿ ವಿವೇಕಾನಂದರು 1892ರಲ್ಲಿ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದಾಗ ನಿರಂಜನಮಠದಲ್ಲಿ ಉಳಿದುಕೊಂಡಿದ್ದರು. ನಂತರ ಆ ಜಾಗವನ್ನು ಮೈಸೂರು ಮಹಾನಗರ ಪಾಲಿಕೆ, ರಾಮಕೃಷ್ಣ ಮಠಕ್ಕೆ ಹಸ್ತಾಂತರ ಮಾಡಿತ್ತು. ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ಯುವ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ಸ್ಮಾರಕಕ್ಕೆ ಹೊಂದಿಕೊಂಡಿರುವ ಶಿಕ್ಷಣ ಇಲಾಖೆಗೆ ಸೇರಿದ ಜಾಗವನ್ನು (ಶಾಲೆ ಮತ್ತು ಬಿಆರ್‌ಸಿ ಕಟ್ಟಡದ ಆವರಣ) ರಾಮಕೃಷ್ಣ ಮಠಕ್ಕೆ ಹಸ್ತಾಂತರಿಸಲು ಹಾಗೂ ಎನ್‌ಟಿಎಂ ಶಾಲೆಯನ್ನು ಹತ್ತಿರದ ದೇವರಾಜು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ ವಿಲೀನಗೊಳಿಸಲು 2013ರ ಜನವರಿ 9ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದರು. ಅದೇ ವರ್ಷ ಮಾರ್ಚ್‌ 15ರಂದು ಜಾಗವನ್ನು ಮಠಕ್ಕೆ ಹಸ್ತಾಂತರಿಸಲಾಗಿತ್ತು. ಇದನ್ನು ಪ್ರಶ್ನಿಸಿ 2013ರಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿತ್ತು.

ಆ ಬಳಿಕವೂ ಹಲವು ಬಾರಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅಂತಿಮವಾಗಿ 2020ರ ನವೆಂಬರ್‌ 19ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2013ರ ಆದೇಶ ಜಾರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಇದನ್ನು ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Related Stories

No stories found.