ತೃತೀಯ ಲಿಂಗಿ ವಿದ್ಯಾರ್ಥಿ ಎನ್‌ಸಿಸಿ ಸೇರ್ಪಡೆಗೆ ಪ್ರಸ್ತುತ ಕಾನೂನು ಅವಕಾಶ ನೀಡದು: ಕೇರಳ ಹೈಕೋರ್ಟ್

ಲಿಂಗಪರಿವರ್ತಿತ ವ್ಯಕ್ತಿಗಳು ಸಮಾನ ಅವಕಾಶಗಳಿಗೆ ಅರ್ಹರಾಗಿದ್ದರೂ, ಎನ್‌ಸಿಸಿಯಲ್ಲಿ ಅವರನ್ನು ಸೇರ್ಪಡೆ ಮಾಡಲು ಶಾಸಕಾಂಗ ಮತ್ತು ಕಾರ್ಯಾಂಗ ಕ್ರಮ ಕೈಗೊಳ್ಳಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ.
Kerala High Court, Transgender pride flag
Kerala High Court, Transgender pride flag
Published on

ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಕಾಯಿದೆ- 1948ರ ಅಡಿಯಲ್ಲಿ ತೃತೀಯ ಲಿಂಗಿ ಅಭ್ಯರ್ಥಿಗಳು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ಗೆ (ಎನ್‌ಸಿಸಿ) ಸೇರ್ಪಡೆಯಾಗಲು ಅರ್ಹರಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ತಿಳಿಸಿದೆ  [ಜಾನ್ವಿನ್ ಕ್ಲೀಟಸ್ ಮತ್ತು ಭಾರತ ಒಕ್ಕೂಟ ಸರ್ಕಾರ ನಡುವಣ ಪ್ರಕರಣ]

ಅಸ್ತಿತ್ವದಲ್ಲಿರುವ ಕಾಯಿದೆ ʼಪುರುಷʼ ಮತ್ತು ʼಮಹಿಳೆʼಯರಿಗೆ ಮಾತ್ರ ದಾಖಲಾಗಲು ಅವಕಾಶ ನೀಡುವುದರಿಂದ ತೃತೀಯ ಲಿಂಗಿ ಅಭ್ಯರ್ಥಿಗಳ ಪ್ರವೇಶಕ್ಕೆ ಅನುವಾಗುವಂತಹ ಶಾಸನಬದ್ಧ ಸೆಕ್ಷನ್‌ ಇಲ್ಲದೇ ಇರುವುದರಿಂದ ಎನ್‌ಸಿಸಿಗೆ ಸೇರ್ಪಡೆಯಾಗಲು ಅವಕಾಶ ಕೋರಿ ತೃತೀಯ ಲಿಂಗಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ನ್ಯಾ. ಎನ್‌ ನಾಗರೇಶ್‌ ತಿಳಿಸಿದರು.

Also Read
ತೃತೀಯ ಲಿಂಗಿ ವ್ಯಕ್ತಿ ಎನ್‌ಸಿಸಿ ಸೇರ್ಪಡೆಗೆ ಕೇರಳ ಹೈಕೋರ್ಟ್‌ ಅನುಮತಿ: ಕಾಯಿದೆ ತಿದ್ದುಪಡಿ ಆದೇಶಕ್ಕೆ ನಕಾರ

ಲಿಂಗಪರಿವರ್ತಿತ ವ್ಯಕ್ತಿಗಳು ಸಮಾನ ಅವಕಾಶಗಳಿಗೆ ಅರ್ಹರಾಗಿದ್ದರೂ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನಲ್ಲಿ ಅವರನ್ನು ಸೇರಿಸಲು ಶಾಸಕಾಂಗ ಮತ್ತು ಕಾರ್ಯಾಂಗ ಕ್ರಮ ಕೈಗೊಳ್ಳಬೇಕಿದೆ ಎಂದು ನ್ಯಾಯಾಲಯ ಹೇಳಿತು.

ಎನ್‌ಸಿಸಿ ತರಬೇತಿ, ವಸತಿ, ಕ್ಯಾಂಪ್‌ಗಳು ಇತ್ಯಾದಿ ಲಿಂಗ ಆಧಾರಿತ ವ್ಯವಸ್ಥೆ ಹೊಂದಿದ್ದು ಪುರುಷ ಇಲ್ಲವೇ ಮಹಿಳಾ ವಿಭಾಗಗಳು ಪ್ರತ್ಯೇಕವಾಗಿರುತ್ತವೆ. ಪ್ರಸ್ತುತ ವ್ಯವಸ್ಥೆ ತೃತೀಯ ಲಿಂಗಿ ವಿದ್ಯಾರ್ಥಿಯನ್ನು ನೇರವಾಗಿ ಒಳ್ಳಗೊಳ್ಳಲು ಅಗತ್ಯ ಮಾರ್ಪಾಡು ಮಾಡಿಕೊಂಡಿಲ್ಲ. ಅಂತಹ ವ್ಯವಸ್ಥೆ ಇಲ್ಲದಿರುವುದು ಅಸಾಂವಿಧಾನಿಕವಲ್ಲ. ಅದು ತರ್ಕಬದ್ಧವಾಗಿಯೇ ಇದೆ ಎಂದಿತು.

22 ವರ್ಷದ ತೃತೀಯ ಲಿಂಗಿ ವಿದ್ಯಾರ್ಥಿ ಕ್ಯಾಲಿಕಟ್ ಗ್ರೂಪ್ 30(K) ಬೆಟಾಲಿಯನ್‌ನಲ್ಲಿ ಎನ್‌ಸಿಸಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದರು. ಅವರು ತೃತೀಯ ಲಿಂಗಿ ವ್ಯಕ್ತಿಯಾದ್ದರಿಂದ ಎನ್‌ಸಿಸಿ ಸೇರ್ಪಡೆಗೆ ನಿರಾಕರಿಸಲಾಗಿತ್ತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Also Read
ಎನ್‌ಸಿಸಿ, ಸಶಸ್ತ್ರ ಪಡೆಗಳಿಗೆ ತೃತೀಯಲಿಂಗಿಗಳು: ಭಾರೀ ಸಿದ್ಧತೆ ಅಗತ್ಯ ಎಂದು ವಿವರಿಸಿದ ಕೇಂದ್ರ ಸರ್ಕಾರ

ತೃತೀಯ ಲಿಂಗಿ ಅಭ್ಯರ್ಥಿಯನ್ನು ಎನ್‌ಸಿಸಿಗೆ ಸೇರ್ಪಡೆ ಮಾಡಲು ಪ್ರಸ್ತುತ ಕಾನೂನು ಮತ್ತು ನೀತಿಗೆ ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕಾಗಿ ಸಮಗ್ರ ಅಧ್ಯಯನ, ತೃತೀಯ ಲಿಂಗಿ ವಿದ್ಯಾರ್ಥಿಗಳ ಸಂಖ್ಯೆ ಪರಿಗಣನೆ, ಪ್ರತ್ಯೇಕ ವಿಭಾಗ ರಚಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ಮನವಿಯನ್ನು ತಿರಸ್ಕರಿಸಿದ ಅದು ನೀತಿಯಲ್ಲಿ ಬದಲಾವಣೆ ತರಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಪರಿಶೀಲಿಸಲು ತೀರ್ಪಿನ ಪ್ರತಿಯನ್ನು ಕೇಂದ್ರ ರಕ್ಷಣಾ ಸಚಿವಾಲಯ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಕಳುಹಿಸಲು ನಿರ್ದೇಶಿಸಿತು.

Kannada Bar & Bench
kannada.barandbench.com