ಸಾವರ್ಕರ್‌ ಕುರಿತ ಹೇಳಿಕೆ: ತಾನು ನಿರ್ದೋಷಿ ಎಂದು ರಾಹುಲ್‌ ಔಪಚಾರಿಕ ಸಮರ್ಥನೆ; ವಿಚಾರಣೆ ಆರಂಭಕ್ಕೆ ಸಿದ್ಧತೆ

ರಾಹುಲ್ ಪರವಾಗಿ ವಕೀಲ ಮಿಲಿಂದ್ ಪವಾರ್ ಅವರು ಮಾಡಿದ ಮನವಿಯನ್ನು ನ್ಯಾಯಾಧೀಶ ಅಮೋಲ್ ಶಿಂಧೆ ದಾಖಲಿಸಿಕೊಂಡರು.
ಸಾವರ್ಕರ್‌ ಕುರಿತ ಹೇಳಿಕೆ: ತಾನು ನಿರ್ದೋಷಿ ಎಂದು ರಾಹುಲ್‌ ಔಪಚಾರಿಕ ಸಮರ್ಥನೆ; ವಿಚಾರಣೆ ಆರಂಭಕ್ಕೆ ಸಿದ್ಧತೆ
Published on

ತಮ್ಮ ವಿರುದ್ಧ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ ವಂಶಸ್ಥ ಸಾತ್ಯಕಿ ಸಾವರ್ಕರ್ ಅವರು ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ತಾನು ತಪ್ಪಿತಸ್ಥ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಪುಣೆಯ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದೆದುರು ಔಪಚಾರಿಕವಾಗಿ ಅರ್ಜಿ ಸಲ್ಲಿಸಿದ್ದಾರೆ [ಸಾತ್ಯಕಿ ಸಾವರ್ಕರ್ ಮತ್ತು ರಾಹುಲ್ ಗಾಂಧಿ ನಡುವಣ ಪ್ರಕರಣ].

ರಾಹುಲ್ ಪರವಾಗಿ ವಕೀಲ ಮಿಲಿಂದ್ ಪವಾರ್ ಅವರು ಮಾಡಿದ ಮನವಿಯನ್ನು ನ್ಯಾಯಾಧೀಶ ಅಮೋಲ್ ಶಿಂಧೆ ದಾಖಲಿಸಿಕೊಂಡರು. ಈ ಔಪಚಾರಿಕ ದಾಖಲೀಕರಣದೊಂದಿಗೆ ಪ್ರಕರಣವು ವಿಚಾರಣೆಗೆ ಸಿದ್ಧಗೊಂಡಂತಾಗಿದೆ.

Also Read
ಸಾವರ್ಕರ್ ಮೊಕದ್ದಮೆ: ದೂರುದಾರರ ವಂಶವೃಕ್ಷ ಬಹಿರಂಗಪಡಿಸಲು ಕೋರಿದ್ದ ರಾಹುಲ್ ಅರ್ಜಿ ತಿರಸ್ಕರಿಸಿದ ಪುಣೆ ನ್ಯಾಯಾಲಯ

ಮಾರ್ಚ್ 2023ರಲ್ಲಿ ಲಂಡನ್‌ನಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ವಿನಾಯಕ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಸಾವರ್ಕರ್ ಅವರ ಬರಹಗಳಲ್ಲಿ ವಿವರಿಸಲಾಗಿದೆ ಎನ್ನಲಾದ ಘಟನೆಯನ್ನು ರಾಹುಲ್‌ ಉಲ್ಲೇಖಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪುಸ್ತಕದಲ್ಲಿ ಸಾವರ್ಕರ್‌ ಅವರು ಒಮ್ಮೆ ತಾನು ಮತ್ತು ತನ್ನ ಸಂಗಡಿಗರು ಓರ್ವ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾಗಿಯೂ, ಅದೊಂದು "ಆಹ್ಲಾದಕರ" ಅನುಭವವಾಗಿತ್ತು ಎಂದು ಹೇಳಿರುವುದನ್ನು ರಾಹುಲ್‌ ಉಲ್ಲೇಖಿಸಿದ್ದರು ಎಂದು ವರದಿಯಾಗಿತ್ತು.

ಆದರೆ, ಇಂತಹ ಯಾವುದೇ ಘಟನೆಯ ಉಲ್ಲೇಖ ಸಾವರ್ಕರ್ ಅವರ ಯಾವುದೇ ಕೃತಿಗಳಲ್ಲಿ ಇಲ್ಲ ಎಂದು ಸಾತ್ಯಕಿ ಅವರು ಹೇಳಿದ್ದು, ರಾಹುಲ್‌ ಹೇಳಿಕೆ ಸುಳ್ಳು ಹಾಗೂ ಮಾನಹಾನಿಕರ ಎಂದು ಆರೋಪಿಸಿದ್ದರು.

Also Read
ಸಾವರ್ಕರ್‌ ಹೆಸರಿನ ದುರ್ಬಳಕೆ: ರಾಷ್ಟ್ರೀಯ ಲಾಂಛನಗಳಡಿ ಪಟ್ಟಿ ಮಾಡಲು ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ರಾಹುಲ್‌ ಅವರಿಗೆ ಶಿಕ್ಷೆ ವಿಧಿಸಬೇಕು. ಜೊತೆಗೆ ಸಿಆರ್‌ಪಿಸಿ ಸೆಕ್ಷನ್ 357ರ ಅಡಿಯಲ್ಲಿ ಪರಿಹಾರ ದೊರಕಿಸಿಕೊಡಬೇಕು ಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿದರು.

ತಮ್ಮ ಹೇಳಿಕೆಗಳು ಐತಿಹಾಸಿಕ ಸಂಗತಿಗಳನ್ನು ಆಧರಿಸಿದ್ದು ವಿವರವಾದ ಪುರಾವೆಗಳು ಅಗತ್ಯವಾಗಿರುವುದರಿಂದ ಪ್ರಕರಣದ ವಿಚಾರಣೆಯನ್ನು ಸಂಕ್ಷಿಪ್ತವಾಗಿ ಆಲಿಸದೆ ವಿವರವಾದ ಸಮನ್ಸ್‌ ವಿಚಾರಣೆಯಾಗಿ ಪರಿವರ್ತಿಸುವಂತೆ ಕೋರಿ ರಾಹುಲ್‌ ಕಳೆದ ಮೇ ತಿಂಗಳಲ್ಲಿ ಮಾಡಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತ್ತು. ಪ್ರಸ್ತುತ ವಿಚಾರಣೆ ವೇಳೆ ಸಾತ್ಯಕಿ ಅವರ ಪರವಾಗಿ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ವಾದ ಮಂಡಿಸಿದರು.

Kannada Bar & Bench
kannada.barandbench.com