ತಮಿಳುನಾಡಿನ ಬುಡಕಟ್ಟು ಮಹಿಳೆಯರು ಕೌಟುಂಬಿಕ ಆಸ್ತಿಯಲ್ಲಿ ಸಮಾನ ಪಾಲಿಗೆ ಅರ್ಹರು: ಮದ್ರಾಸ್ ಹೈಕೋರ್ಟ್
ತಮಿಳುನಾಡಿನ ಬುಡಕಟ್ಟು ಸಮುದಾಯದ ಮಹಿಳೆಯರು ಹಿಂದೂ ಉತ್ತರಾಧಿಕಾರ ಕಾಯಿದೆ ಅಡಿ ಪುರುಷರಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಪಡೆಯಲು ಅರ್ಹರು ಎಂದು ಈಚೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ [ಶರವಣನ್ ವರ್ಸಸ್ ಸೆಮ್ಮಾಯಿ].
ಕುಟುಂಬದ ಪುರುಷರಂತೆ ಮಹಿಳೆಯರೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರು ಎಂದು ವಿಚಾರಣಾಧೀನ ನ್ಯಾಯಾಲಯವು 2017ರ ಅಕ್ಟೋಬರ್‌ನಲ್ಲಿ ಮಾಡಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್ ಎಂ ಸುಬ್ರಮಣಿಯಮ್ ಅವರ ನೇತೃತ್ವದ ಏಕಸದಸ್ಯ ಪೀಠವು ಫೆಬ್ರವರಿ 22ರಂದು ಎತ್ತಿ ಹಿಡಿದಿದೆ.
ಅಧಿಸೂಚಿತ ಬುಡಕಟ್ಟು ಸಮುದಾಯದ ಸಂಪ್ರಾದಯ ಮತ್ತು ಆಚರಣೆಗಳು ಮಹಿಳೆಯರ ಸಮಾನ ಹಕ್ಕಿಗೆ ನಿರ್ಬಂಧಿಸಿದರೂ ಅಂಥ ಸಂಪ್ರದಾಯಗಳು ಕಾನೂನು ಮತ್ತು ಸಾರ್ವಜನಿಕ ನೀತಿಯನ್ನು ಮೀರಲಾಗದು ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಹಿಂದೂ ಉತ್ತರಾಧಿಕಾರ ಕಾಯಿದೆ ಅಡಿ ಬುಡಕಟ್ಟು ಸಮದಾಯದ ಮಹಿಳೆಯರನ್ನು ಕೌಟುಂಬಿಕ ಆಸ್ತಿಯಲ್ಲಿ ಪಾಲು ಪಡೆಯುವುದರಿಂದ ಹೊರಗಿಡಲಾಗದು ಎಂದು ಹೈಕೋರ್ಟ್ ಹೇಳಿದೆ.
ಕುಟುಂಬ ಆಸ್ತಿಯಲ್ಲಿ ಪಾಲು ಕೋರಿ ಅಧಿಸೂಚಿತ ಬುಡಕಟ್ಟು ಸಮುದಾಯದ ತಾಯಿ-ಮಗಳು ಸಲ್ಲಿಸಿದ್ದ ದಾವೆಯನ್ನು ವಿಚಾರಣಾಧೀನ ನ್ಯಾಯಾಲಯವು ಮಾನ್ಯ ಮಾಡಿತ್ತು. ಇದನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಕುಟುಂಬದ ಪುರುಷರು ಪ್ರಶ್ನಿಸಿದ್ದರು.
ಪಕ್ಷಕಾರರು ವ್ಯಾಜ್ಯದ ಕಾರಣವಾಗಿರುವ ಆಸ್ತಿಯು ಇತ್ಯರ್ಥದ ಒಪ್ಪಂದ ಪತ್ರದ ಭಾಗವಾಗಿರುವುದರಿಂದ ಅವರು ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಲ್ಲ ಎಂದು ಮೇಲ್ಮನವಿದಾರರು ಆರಂಭದಲ್ಲಿ ವಾದಿಸಿದ್ದರು. ಆದರೆ, ಹಿಂದೂ ಉತ್ತರಾಧಿಕಾರ ಕಾಯಿದೆಯಿಂದ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಹೊರಗಿಡಲಾಗಿದೆ ಎಂದು ಅರ್ಜಿದಾರರ ವಕೀಲರು ವಾದ ಮಂಡಿಸಿದ್ದರು. ಇದನ್ನು ಹೈಕೋರ್ಟ್ ಒಪ್ಪಲಿಲ್ಲ.


