ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ರಾಜೀನಾಮೆ ನೀಡಿದ್ದಾರೆಂಬ ನಕಲಿ ಪತ್ರ ಹೊಂದಿದ್ದ ಸಂದೇಶದ ಮೂಲ ಬಹಿರಂಗಪಡಿಸಲು ವಾಟ್ಸಾಪ್ ಅಪ್ಲಿಕೇಷನ್‌ಗೆ ಸೂಚಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ ಈಚೆಗೆ ತಡೆ ನೀಡಿದೆ.
ಪ್ರಕರಣದ ಎಫ್‌ಐಆರ್್ಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಲು ಪೊಲೀಸರಿಗೆ ಮುಖ್ಯ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಮತ್ತು ನ್ಯಾಯಮೂರ್ತಿ ಟಿ ಅಮರನಾಥ್ ಗೌಡ್ ಅವರಿದ್ದ ವಿಭಾಗೀಯ ಪೀಠ ಅನುಮತಿ ನೀಡಿದೆ.
ವಾಟ್ಸಾಪ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆಯೂ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ಡಿಸೆಂಬರ್ 15ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಸಂದೇಶದ ಮೂಲ ಬಹಿರಂಗಪಡಿಸುವಂತೆ ವಾಟ್ಸಾಪ್ ನೋಡಲ್ ಅಧಿಕಾರಿಗೆ ಸೂಚಿಸಲು ಪೊಲೀಸರಿಗೆ ಅನುಮತಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಾಟ್ಸಾಪ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಅವರ ನಕಲಿ ರಾಜೀನಾಮೆ ಪತ್ರ ಹರಿದಾಡುತ್ತಿದೆ ಎಂಬ ದೂರಿನ ಮೇಲರೆಗೆ ಪೊಲೀಸರು ಮೇ 25ರಂದು ಎಫ್ಐಆರ್ ದಾಖಲಿಸಿಕೊಂಡಿದ್ದರು. ಮುಖ್ಯಮಂತ್ರಿ ಸಹಾ ಅವರ ಸಹಿ ಫೋರ್ಜರಿ ಮಾಡಲಾಗಿದೆ ಅಲ್ಲದೆ ಮುಖ್ಯಮಂತ್ರಿಯವರ ಕಳಂಕರಹಿತ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶ ಹೊಂದಲಾಗಿದೆ ಎಂದು ದೂರುದಾರರು ಕಳವಳ ವ್ಯಕ್ತಪಡಿಸಿದ್ದರು.
ಮಾಹಿತಿ ತಂತ್ರಜ್ಞಾನ (ಮಧ್ಯಸ್ಥವೇದಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ರ ನಿಯಮ 4(2)ರ ಪ್ರಕಾರ ಮೂಲ ಬಹಿರಂಗಪಡಿಸಲು ಮಧ್ಯಸ್ಥವೇದಿಕೆಗಳಿಗೆ ಸೂಚಿಸಬಹುದಾದರೂ ಅಂತಹ ಆದೇಶವನ್ನು "ಭಾರತದ ಸಾರ್ವಭೌಮತ್ವ ಮತ್ತು ಏಕತೆಗೆ ಧಕ್ಕೆ ತಂದಾಗ ಮಾತ್ರ ರವಾನಿಸಬಹುದು ಎಂದು ನಿಯಮ ಹೇಳುವುದಾಗಿ ವಾಟ್ಸಾಪ್ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ವಾದ ಮಂಡಿಸಿದರು.
ಮಧ್ಯಂತರ ರಕ್ಷಣೆಗಾಗಿ ವಾಟ್ಸಾಪ್ ಮಾಡಿದ್ದ ಮನವಿಯನ್ನು ವಿರೋಧಿಸಿದ ಅಡ್ವೊಕೇಟ್ ಜನರಲ್ ಎಸ್ ಎಸ್ ಡೇ ಅವರು ಸಂದೇಶದ ಮೂಲ ಬಹಿರಂಗಪಡಿಸುವುದನ್ನು ಆಕ್ಷೇಪಿಸಲು ವಾಟ್ಸಾಪ್‌ಗೆ ಯಾವುದೇ ಅರ್ಹತೆ ಇಲ್ಲ ಎಂದು ವಾದಿಸಿದರು. ಅಲ್ಲದೆ ಯಾವೊಬ್ಬ ಆರೋಪಿಯೂ ತನ್ನ ಮಾಹಿತಿ ಬಹಿರಂಗಪಡಿಸಬಾರದು ಎಂದು ನ್ಯಾಯಾಲಯವನ್ನು ಕೋರಿಲ್ಲ ಎಂದರು.
ವಾದಗಳನ್ನು ಪರಿಗಣಿಸಿದ ನ್ಯಾಯಾಲಯ ನಿಯಮ 4(2) ಅಡಿಯಲ್ಲಿ ಪರಿಗಣಿಸಿದಂತೆ ಪ್ರಸ್ತುತ ಪ್ರಕರಣದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಬೆದರಿಕೆಯ ಪ್ರಮಾಣವನ್ನು ನಿರ್ದಿಷ್ಟವಾಗಿ ದಾಖಲಿಸಿಲ್ಲ ಎಂದು ತಿಳಿಸಿ ವಾಟ್ಸಾಪ್‌ಗೆ ಮಧ್ಯಂತರ ಪರಿಹಾರ ನೀಡಿತು.