ನೂರಾರು ಕೋಟಿ ರೂಪಾಯಿಗಳ ಹಗರಣ ಎನ್ನಲಾದ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣವನ್ನು ಭೇದಿಸಿರುವ ಮುಂಬೈ ಅಪರಾಧ ವಿಭಾಗದ ಪೊಲೀಸರು ಫಕ್ಸ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳ ಮಾಲೀಕರನ್ನು ಬಂಧಿಸಿದ್ದಾರೆ.
“ಫಕ್ಸ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ವಾಹಿನಿಗಳ ಮಾಲೀಕರನ್ನು ಬೊರಿವೆಲಿಯ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 9ರ ವರೆಗೆ ಪೊಲೀಸರ ವಶಕ್ಕೆ ನೀಡಿದ್ದಾರೆ” ಎಂದು ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಸೆಕ್ಷನ್ 409 (ವಿಶ್ವಾಸ ದ್ರೋಹ ಅಪರಾಧ) ಮತ್ತು 420 (ಮೋಸ ಮತ್ತು ಅಪ್ರಾಮಾಣಿಕ ವಂಚನೆ) ಅಡಿ ದೂರು ದಾಖಲಿಸಲಾಗಿದೆ.
ಸದ್ಯ ಟಿಆರ್‌ಪಿ ರೇಟಿಂಗ್‌ನಲ್ಲಿ ಕೈಚಳಕ ತೋರಲು ಎಷ್ಟು ಹಣ ಸಂಗ್ರಹಿಸಲಾಗಿದೆ ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಇದರ ಆಧಾರದಲ್ಲಿ ಮತ್ತು ಅದೇ ಸಂದರ್ಭದಲ್ಲಿ ಜಾಹೀರಾತುದಾರರು ಏನಾದರೂ ಪಿತೂರಿ ನಡೆಸಿದ್ದಾರೆಯೇ ಅಥವಾ ಅಪರಾಧದಲ್ಲಿ ಅವರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ತಿಳಿಯಲು ಅವರನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಡಿ ಇರುವ ಪ್ರಸಾರ ಪ್ರೇಕ್ಷಕರ ಸಂಶೋಧನಾ ಸಮಿತಿಯು (ಬಾರ್ಕ್) ಬಾರೋಮೀಟರ್ ಸಹಾಯದಿಂದ ಟಿಆರ್‌ಪಿಯನ್ನು ನಿರ್ಧರಿಸುತ್ತದೆ. ಹನ್ಸ್ ಸಂಶೋಧನಾ ಸಮೂಹವು ಬಾರೋಮೀಟರ್ ಅಳವಡಿಸುವ ಕೆಲಸ ಮಾಡುತ್ತದೆ. ಬಾರೋಮೀಟರ್ ಅಳವಡಿಸಿರುವ ಸ್ಥಳದ ದತ್ತಾಂಶವು ಗೌಪ್ಯವಾಗಿದ್ದು, ಬಾರ್ಕ್ ಅಲ್ಲದೇ ಹನ್ಸ್‌ಗೆ ಮಾತ್ರ ತಿಳಿದಿರುತ್ತದೆ.
ಜನರಿಗೆ ಹಣದ ಆಮಿಷವೊಡ್ಡಿ ನಿರ್ದಿಷ್ಟ ಟಿವಿ ಚಾನೆಲ್‌ಗಳನ್ನು ನೋಡುವಂತೆ ಅವರನ್ನು ಪ್ರೇರೇಪಿಸಿ 'ಮೀಟರ್ ಸೇವೆಗಳ ಮಾದರಿ' ಸಂಗ್ರಹಣೆಯಲ್ಲಿ ಕೈಚಳ ತೋರುವ ಕೆಲಸವನ್ನು ಹನ್ಸ್ ಸಿಬ್ಬಂದಿ ಮಾಡುತ್ತಿರುವುದನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿದ್ದಾರೆ. ಬಾರ್ಕ್ ಮೀಟರ್ ಅಳವಡಿಸಿರುವ ಮನೆಯ ಮಾಲೀಕರಿಗೆ ನಿರ್ದಿಷ್ಟ ಟಿವಿ ಚಾನೆಲ್‌ಗಳನ್ನು ನೋಡಲು ಹಣಪಾತಿಸುವ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ವಿಶಾಲ್ ವೇದ್ ಭಂಡಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಚೋದನೆಗೆ ಒಳಪಟ್ಟಿರುವ ಮನೆಯ ಮಾಲೀಕರ ಜೊತೆ ಚರ್ಚಿಸಿದಾಗ ಅವರು ತಮಗೆ ಇಷ್ಟವಿಲ್ಲದಿದ್ದರೂ ನಿರ್ದಿಷ್ಟ ಚಾನೆಲ್‌ಗಳನ್ನು ಆನ್ ಮಾಡಿ ಬಿಡಲು ಹಣ ಸ್ವೀಕರಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ.
ಎಫ್ಐಆರ್ನಲ್ಲಿ ಇಂಡಿಯಾ ಟುಡೇ ಮಾಹಿನಿಯನ್ನು ಮಾತ್ರ ಹೆಸರಿಸಲಾಗಿದೆ. ಅಲ್ಲಿ ತನ್ನ ಹೆಸರು ಉಲ್ಲೇಖಿಸಿಲ್ಲ. ಹೀಗಿದ್ದರೂ ರಿಪಬ್ಲಿಕ್ ಟಿವಿಯನ್ನು ಎಳೆದು ತರುತ್ತಿರುವುದೇಕೆ? ಎಂದು ರಿಪಬ್ಲಿಕ್ ಟಿವಿಯು ಈ ಕುರಿತ ತನ್ನ ವರದಿಯಲ್ಲಿ ಪ್ರಶ್ನಿಸಿದೆ.
ಅಕ್ಟೋಬರ್ 6ರಂದು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಇಂಡಿಯಾ ಟುಡೇ ಹಾಗೂ ಇತರೆ ಮಾಧ್ಯಮ ಕಂಪೆನಿಗಳನ್ನು ಉಲ್ಲೇಖಿಸಲಾಗಿದೆ. ದೂರಿನಲ್ಲಿ ರಿಪಬ್ಲಿಕ್ ಟಿವಿಯ ಹೆಸರನ್ನು ಉಲ್ಲೇಖಿಸಲಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಬಾರ್ಕ್‌ಗೆ ಅಕ್ಟೋಬರ್ 7ರಂದು ಮುಂಬೈ ಪೊಲೀಸರು ನೋಟಿಸ್ ನೀಡಿದ್ದು, ಅದರಲ್ಲಿ ರಿಪಬ್ಲಿಕ್ ಟಿವಿ ನೋಡಲು ಹಣ ನೀಡುವ ಮೂಲಕ ಬಾರೋಮೀಟರ್‌ನಲ್ಲಿ ಕೈಚಳ ತೋರಿದ್ದಾಗಿ ಬಂಧಿತ ಆರೋಪಿ ವಿಶಾಲ್ ವೇದ್ ಭಂಡಾರಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ರಿಪಬ್ಲಿಕ್ ಟಿವಿಯನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಸಿಆರ್‌ಪಿಸಿಯ ಸೆಕ್ಷನ್ 91ರ ಅಡಿ ಬಾರ್ಕ್‌ಗೆ ನೀಡಲಾಗಿರುವ ನೋಟಿಸ್‌ನಲ್ಲಿ ರಿಪಬ್ಲಿಕ್ ಟಿವಿಯ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಇಂಡಿಯಾ ಟುಡೇ ವಾಹಿನಿಯನ್ನು ತನಿಖೆಗೆ ಒಳಪಡಿಸಲಾಗಿದೆಯೇ ಅಥವಾ ಇನ್ನಷ್ಟೇ ತನಿಖೆಗೆ ಒಳಪಡಿಸಬೇಕೆ ಎನ್ನುವ ಬಗ್ಗೆ ಮುಂಬೈ ಪೊಲೀಸರು ಮಾಧ್ಯಮಗೋಷ್ಠಿಯಲ್ಲಿ ಯಾವುದೇ ವಿವರಣೆ ನೀಡಿಲ್ಲ.