[ಟಿಆರ್‌ಪಿ ಹಗರಣ] ಬಾರ್ಕ್ ತಟಸ್ಥ ಸಂಸ್ಥೆಯಾಗಿದ್ದು‌ ವಾಹಿನಿಗಳ‌ ಮುಖ್ಯಸ್ಥರ ಜೊತೆ ಮಾತನಾಡಲು ಯಾವುದೇ ಸಕಾರಣ ಹೊಂದಿಲ್ಲ

ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತ ಅವರಿಗೆ ಜಾಮೀನು ನೀಡುವಿಕೆಯನ್ನು ವಿರೋಧಿಸಿ ಸರ್ಕಾರಿ ಅಭಿಯೋಜಕ ಶಿಶಿರ್ ಹಿರೆ, ರಿಪಬ್ಲಿಕ್ ಟಿವಿ ಸಿಬ್ಬಂದಿ ಮತ್ತು ಬಾರ್ಕ್ ಮಾಜಿ ಉದ್ಯೋಗಿ ನಡುವಿನ ಇಮೇಲ್‌ ಮತ್ತು ವಾಟ್ಸಪ್ ಚಾಟ್‌ಗಳನ್ನು ಓದಿದರು.
Mumbai Police, TRP scam
Mumbai Police, TRP scam

ಬ್ರಾಡ್ಕಾ‌ಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ (ಬಾರ್ಕ್‌) ಅಧಿಕಾರಿಯು ತಟಸ್ಥವಾಗಿರಬೇಕಿದ್ದು, ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ಅವರ ಜೊತೆಗೆ ಮಾಹಿತಿ ಹಂಚಿಕೊಳ್ಳುವ ಯಾವುದೇ ಸಕಾರಣ ಇರಲಿಲ್ಲ ಎಂದು ಮುಂಬೈನ ಸೆಷನ್ಸ್‌ ನ್ಯಾಯಾಲಯದ ಮುಂದೆ ಸರ್ಕಾರಿ ಅಭಿಯೋಜಕ ಶಿಶಿರ್ ಹಿರೆ ಶನಿವಾರ ವಾದಿಸಿದ್ದಾರೆ.

ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ (ಟಿಆರ್‌ಪಿ) ಹಗರಣದಲ್ಲಿ ಬಂಧಿತರಾಗಿರುವ ಬಾರ್ಕ್‌ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪಾರ್ಥೊ ದಾಸ್‌ಗುಪ್ತ ಅವರ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಮೇಲಿನ ವಾದ ಮಂಡನೆ ಮಾಡಲಾಗಿದೆ.

ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗದ ಆರೋಪದಲ್ಲಿ ಡಿಸೆಂಬರ್‌ 24ರಂದು ದಾಸ್‌ಗುಪ್ತ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಡಿಸೆಂಬರ್‌ 31ರ ವರೆಗೆ ಪೊಲೀಸ್‌ ವಶದಲ್ಲಿದ್ದರು. ಬಳಿಕ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ವೈಯಕ್ತಿಕ ಲಾಭಕ್ಕಾಗಿ ದಾಸ್‌ಗುಪ್ತ ಅವರು ಬಾರ್ಕ್‌ನಲ್ಲಿ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತಾವು ನಿರ್ವಹಿಸಿದ್ದ ಹುದ್ದೆಗೆ ದಾಸಗುಪ್ತ ಕಳಂಕ ತಂದಿದ್ದಾರೆ ಎಂದು ಹಿರೆ ವಾದಿಸಿದರು. ಚಾನೆಲ್‌ಗಳ ಟಿಆರ್‌ಪಿ ನಿರ್ವಹಿಸುವ, ಜಾಹೀರಾತಿನ ಮೂಲಕ ಚಾನೆಲ್‌ಗಳ ಆದಾಯ ನಿರ್ಧಾರ ಮಾಡುವ ಸಂಸ್ಥೆಯೊಂದರ ಸಿಇಒ ಆಗಿ ದಾಸಗುಪ್ತ ಕೆಲಸ ಮಾಡಿದ್ದಾರೆ. “ಜಾಹೀರಾತು ಕ್ಷೇತ್ರವು 32,000 ಸಾವಿರ ಕೋಟಿ ರೂಪಾಯಿ ಒಳಗೊಂಡಿರುವ ಉದ್ಯಮವಾಗಿದೆ” ಎಂದು ಹಿರೆ ಹೇಳಿದರು.

ಚಾನೆಲ್‌ಗಳ ಟಿಆರ್‌ಪಿ ಹೆಚ್ಚಳವು ಅವುಗಳ ಆದಾಯಕ್ಕೆ ಸಮಾನಂತರವಾಗಿರುತ್ತದೆ ಎಂದು ಹಿರೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಆದ್ದರಿಂದ, ಚಾನಲ್‌ಗಳು ಟಿಆರ್‌ಪಿಯನ್ನು ಈ ಕೆಳಗಿನ ವಿಧಾನಗಳ ಮೂಲಕ ತಿರುಚಲು ಪ್ರಯತ್ನಿಸಿದರು ಎಂದು ವಿವರಿಸಿ ಕಾರಣಗಳನ್ನು ಪಟ್ಟಿ ಮಾಡಿದರು:

  1. ಚಾನೆಲ್‌ಗಳನ್ನು ದೀರ್ಘವಾಧಿಯವರೆಗೆ ನೋಡುವಂತೆ ಭೌತಿಕವಾಗಿ ಪ್ರೇಕ್ಷಕರ ಸಂಖ್ಯೆಯನ್ನು ತಿರುಚಿದ್ದಾರೆ.

  2. ಬಾರ್ಕ್‌ ಸಹಾಯದಿಂದ ಆಂತರಿಕವಾಗಿ ವೀಕ್ಷಕರ ಅಂಕಿ-ಅಂಶಗಳನ್ನು ತಿರುಚುವ ಮೂಲಕ ಅದನ್ನು ಬದಲಿಸಿದ್ದಾರೆ.

ಸುದ್ದಿ ವಾಹಿನಿಗಳ ಟಿಆರ್‌ಪಿ ತಿರುಚುವ ಕೃತ್ಯದಲ್ಲಿ ದಾಸ್‌ಗುಪ್ತ ಹೇಗೆ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಅದರಲ್ಲೂ ರಿಪಬ್ಲಿಕ್‌ ಟಿವಿಯ ಕುರಿತಂತೆ ಅವರು ನಡೆಸಿರುವ ಅಕ್ರಮದ ಬಗ್ಗೆ ಮುಂಬೈ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ಹಿರೆ ತಿಳಿಸಿದರು. ಹಿರೆ ಅವರು ವಿಧಿವಿಜ್ಞಾನ ಆಡಿಟ್‌ ವರದಿ ಆಧರಿಸಿ ವಾದಿಸಿದ್ದು, ಅದು ರಿಪಬ್ಲಿಕ್‌ ಸಿಬ್ಬಂದಿ ಮತ್ತು ಬಾರ್ಕ್‌ ಸಿಬ್ಬಂದಿಯ ನಡುವಿನ ವಾಟ್ಸಪ್‌ ಸಂದೇಶಗಳನ್ನು ಪರಿಶೀಲಿಸಿದೆ.

ರಿಪಬ್ಲಿಕ್ ಟಿವಿ ಸಿಬ್ಬಂದಿ ಮತ್ತು ಬಾರ್ಕ್ ಮಾಜಿ ಸಿಬ್ಬಂದಿ ನಡುವಿನ ಇಮೇಲ್‌ ಮತ್ತು ವಾಟ್ಸಪ್ ಸಂದೇಶ‌ಗಳನ್ನು ಹಿರೆ ಓದಿದರು. ಕಂಪನಿಯ ಹಣಕಾಸಿನ ವಿಚಾರದಲ್ಲಿ ಭಾಗಿಯಾಗಿರುವ ರಿಪಬ್ಲಿಕ್ ಟಿವಿ ಚಾನೆಲ್‌ನ ಪ್ರತಿಯೊಬ್ಬ ಉದ್ಯೋಗಿಯೂ ಬಾರ್ಕ್‌ನ ಮಾಜಿ ಉದ್ಯೋಗಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ನ್ಯಾಯಾಲಯದ ಗಮನಸೆಳೆದರು.

ರಿಪಬ್ಲಿಕ್ ಟಿವಿಯ ರೇಟಿಂಗ್‌ಗಳನ್ನು ಕುಶಲತೆಯಿಂದ ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಹಾಗೂ ಟೈಮ್ಸ್ ನೌ ರೇಟಿಂಗ್ ಅನ್ನು ಕುಗ್ಗಿಸುವ ಸಂಬಂಧ ದಾಸ್‌ಗುಪ್ತ ಮತ್ತು ಗೋಸ್ವಾಮಿ ನಡುವೆ ವಿನಿಮಯವಾದ ಸಂಭಾಷಣೆಯನ್ನು ಸರ್ಕಾರಿ ಅಭಿಯೋಜಕರು ನ್ಯಾಯಾಲಯದಲ್ಲಿ ಓದಿದರು.

“ದಾಸ್‌ಗುಪ್ತ ತಟಸ್ಥವಾಗಿರಬೇಕಿತ್ತು. ಅರ್ನಾಬ್ ಗೋಸ್ವಾಮಿ ಜೊತೆ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವೇನಿತ್ತು?” ಎಂದು ಹಿರೆ ಪ್ರಶ್ನಿಸಿದರು.

ಟಿಆರ್‌ಪಿ ಕಾರ್ಯವಿಧಾನದ ಬಗ್ಗೆ ತಿಳಿದಿದ್ದರಿಂದ ಗೋಸ್ವಾಮಿ ಅವರು ತಮ್ಮನ್ನು ಸಂಪರ್ಕಿಸಿದ್ದರು ಎಂದು ದಾಸ್‌ಗುಪ್ತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹಿರೆ ನ್ಯಾಯಾಲಯಕ್ಕೆ ವಿವರಿಸಿದ್ದು, ಅದಕ್ಕಾಗಿ ಅವರಿಗೆ ಲಂಚವನ್ನೂ ಪಾವತಿಸಲಾಗಿದೆ ಎಂದಿದ್ದಾರೆ.

ದಾಸ್‌ಗುಪ್ತ ಅವರಿಗೆ ಜಾಮೀನು ನೀಡಿದರೆ ಅವರು ತಮ್ಮ ಪ್ರಭಾವ ಬಳಸಿ ಮುಂಬೈ ಪೊಲೀಸರಿಗೆ ತನಿಖೆಗೆ ಸಹಕರಿಸದಂತೆ ಉದ್ಯೋಗಿಗಳಿಗೆ ಸೂಚಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ಹಿರೆ ವ್ಯಕ್ತಪಡಿಸಿ, ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು.

Also Read
[ಟಿಆರ್‌ಪಿ ಹಗರಣ] ಮುಂಬೈ ಪೊಲೀಸರಿಗೆ ತನಿಖೆ ನಡೆಸಲು ಅಧಿಕಾರವಿಲ್ಲ: ಬಾಂಬೆ ಹೈಕೋರ್ಟ್‌ನಲ್ಲಿ ಹರೀಶ್ ಸಾಳ್ವೆ ವಾದ

ಸಮಯದ ಕೊರತೆಯ ಹಿನ್ನೆಲೆಯಲ್ಲಿ ಹಿರೆ ಅವರು ವಾದ ಪೂರ್ಣಗೊಳಿಸಲಾಗಲಿಲ್ಲ. ಜನವರಿ 19ರಂದು ಅವರು ವಾದ ಮುಂದುವರಿಸುವ ಸಾಧ್ಯತೆ ಇದೆ. ದಾಸ್‌ಗುಪ್ತ ಪರ ವಕೀಲ ಶಾರ್ದೂಲ್‌ ಸಿಂಗ್‌ ಸೋಮವಾರ ತಮ್ಮ ವಾದ ಪೂರ್ಣಗೊಳಿಸಿದ್ದರು.

ಟಿಆರ್‌ಪಿ ಹಗರಣದಲ್ಲಿ ಜಾಮೀನು ಮಂಜೂರು ಮಾಡಲು ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ದಾಸ್‌ಗುಪ್ತ ಅವರು ಸೆಷನ್ಸ್‌ ನ್ಯಾಯಾಲಯ ಎಡತಾಕಿದ್ದಾರೆ.

Related Stories

No stories found.
Kannada Bar & Bench
kannada.barandbench.com